Application : ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಿಲ್ಲ; ವರ್ಷವಿಡೀ ಸಲ್ಲಿಕೆಗೆ ಅವಕಾಶ

ಬೆಂಗಳೂರು: ರಾಜ್ಯ ಸರ್ಕಾರ ಘೋಷಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಗೆ ಆಫ್ ಲೈನ್ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಅರ್ಜಿ ಸಲ್ಲಿಕೆಗೆ ಯಾವುದೇ ಕೊನೆಯ ದಿನಾಂಕ ಇರುವುದಿಲ್ಲ. ವರ್ಷವಿಡೀ ನಿರಂತರ ಪ್ರಕ್ರಿಯೆಯಾಗಿರುತ್ತದೆ. ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ, ಸಂಪೂರ್ಣ ಉಚಿತವಾಗಿರುತ್ತದೆ. ಯೋಜನೆಯ ಕುರಿತಂತೆ ಸಂದೇಹ/ ಕುಂದು ಕೊರತೆಗಳಿದ್ದಲ್ಲಿ ಸಹಾಯವಾಣಿ – 1902 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು.
ಅರ್ಜಿ ಸಲ್ಲಿಕೆಗೆ ಹಲವು ಲೋಪಗಳು :
ಸರಿಪಡಿಸಲು ಆಧಾರ್ ಕೇಂದ್ರಗಳತ್ತ ಗೃಹ ಲಕ್ಷ್ಮಿಯರು 2 ಸಾವಿರ ರೂಪಾಯಿ ಪಡೆಯುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಆಧಾರ್ ಕಾರ್ಡ್ ಲೋಪಗಳನ್ನು ಸರಿಪಡಿಸಲು ಮಹಿಳೆಯರು ಸಂಬಂಧಿಕರ ಜೊತೆ ಆಧಾರ್ ಸೇವೆಗಳಿಗೆ ಧಾವಿಸುತ್ತಿದ್ದಾರೆ.
ಆಧಾರ್ ಕಾರ್ಡ್ ಅನ್ನು ಮೊಬೈಲ್ ಸಂಖ್ಯೆಗೆ ಜೋಡಣೆ, ವಿಳಾಸ ತಿದ್ದುಪಡಿ, ಹೆಬ್ಬೆಟ್ಟಿನ ಗುರುತು ನೀಡಲು ಆಧಾರ್ ಸೇವಾ ಕೇಂದ್ರಗಳಿಗೆ ಬರುತ್ತಿದ್ದು, ನೂಕು ನುಗ್ಗಲು ಉಂಟಾಗಿದೆ. ಬೆಳಿಗ್ಗೆಯೇ ಕೇಂದ್ರಗಳಿಗೆ ಬರುವ ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಲೋಪಗಳನ್ನು ಸರಿಪಡಿಸಿಕೊಳ್ಳುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.
ಅಂದಹಾಗೆ ಈ ಯೋಜನೆಯ ಲಾಭ ಪಡೆಯಬೇಕಾದರೆ ಆಧಾರ್ ಕಾರ್ಡ್‌ಗೆ ಮೊಬೈಲ್ ನಂಬರ್ ಜೋಡಣೆ ಕಡ್ಡಾಯವಾಗಿದೆ. ಎಷ್ಟೋ ಜನರ ಮೊಬೈಲ್ ಸಂಖ್ಯೆಗಳು ಆಧಾರ್ ಕಾರ್ಡ್‌ಗೆ ಜೋಡಣೆಯಾಗಿರುವುದಿಲ್ಲ. ಅದಕ್ಕಾಗಿಯೇ ಲೋಪ ದೋಷಗಳನ್ನು ಸರಿಪಡಿಸಿಕೊಳ್ಳಲು ದಾವಣಗೆರೆ ಒನ್, ಗ್ರಾಮ ಒನ್ ಹಾಗೂ ನೆಮ್ಮದಿಯ ಕೇಂದ್ರಗಳಿಗೆ ಧಾವಿಸುತ್ತಿದ್ದಾರೆ. ಆಧಾರ್‌ನಲ್ಲಿ ಕೆಲವರ ಹೆಬ್ಬಿಟ್ಟಿನ ಗುರುತು ಸ್ಪಷ್ಟವಾಗಿ ಬಂದಿರುವುದಿಲ್ಲ. ಅದನ್ನೂ ಸರಿಪಡಿಸಿಕೊಳ್ಳಲು ಧಾವಿಸುತ್ತಿದ್ದಾರೆ. ಈ ಹಿಂದೆ ವಿವಾಹವಾದ ಕೆಲವರು, ಹೊಸದಾಗಿ ಮದುವೆಯಾಗಿರುವವರು ಪಡಿತರ ಚೀಟಿಗೆ ಹೆಸರು ಸೇರ್ಪಡೆಗೆ ಆಧಾರ್ ಕಾರ್ಡ್‌ನಲ್ಲಿ ವಿಳಾಸ ಬದಲಾವಣೆಗೆಗಾಗಿ ಸಂಬಂಧಿಕರು ಹಾಗೂ ಪತಿಯ ಜೊತೆಯಲ್ಲಿ ಆಧಾರ್ ಸೇವಾ ಕೇಂದ್ರಗಳಿಗೆ ಎಡತಾಕುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ಗ್ರಾಮ ಒನ್, ದಾವಣಗೆರೆ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿರುವುದರಿಂದ ಎಲ್ಲರೂ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗಳಿಗೆ ಮೊಬೈಲ್ ಸಂಖ್ಯೆಗಳ ಜೋಡಣೆ ಕಡ್ಡಾಯವಾಗಿ ಮಾಡಿಸಬೇಕು. ದಾಖಲೆಗಳು ಸರಿ ಇದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.