ಚಳಿಗಾಲದ ಅಧಿವೇಶನ ದೊಳಗೆ ಅನುದಾನಿತ ನೌಕರರಿಗೆ ಪಿಂಚಣಿ ಸೌಲಭ್ಯ ನೀಡದಿದ್ದರೆ ರಾಜ್ಯಾದ್ಯಂತ ಶಾಲಾ ಕಾಲೇಜು ಬಂದ್ ಮಾಡಿ ಉಪವಾಸ ಸತ್ಯಗ್ರಹ

ದಾವಣಗೆರೆ: ಚಳಿಗಾಲದ ಅಧಿವೇಶನದೊಳಗಾಗಿ ಅನುದಾನಿತ ನೌಕರರಿಗೆ ಪಿಂಚಣಿ ಸೌಲಭ್ಯ ನೀಡದಿದ್ದರೆ ರಾಜ್ಯಾದ್ಯಂತ ಶಾಲಾ-ಕಾಲೇಜು ಬಂದ್ ಮಾಡಿ ಉಪವಾಸ ಕೂರುವ ಬಗ್ಗೆ ಇಂದು ನಡೆದ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ನಡೆಸಿದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ಪಿಂಚಣಿ ಹೋರಾಟದ ಕುರಿತು ಸೋಮವಾರ ಇಲ್ಲಿನ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಅಭಿಯಾನದಲ್ಲಿ ಒಕ್ಕೊರಲ ಅಭಿಪ್ರಾಯ ಇದಾಗಿತ್ತು.
2006ರ ಪೂರ್ವದಿಂದ ಸೇವೆ ಸಲ್ಲಿಸಿದವರಿಗೆ ನಿಶ್ಚಿತ ಮತ್ತು ನಂತರದಿಂದ ಸೇವೆ ಸಲ್ಲಿಸುತ್ತಿರುವವರಿಗೆ ನೂತನ ಪಿಂಚಣಿ ಯೋಜನೆಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಸಭೆಯಲ್ಲಿ ಸರ್ಕಾರಕ್ಕೆ ಆಗ್ರಹಿಸಲಾಯಿತು.
ಸಂಘದ ರಾಜ್ಯಾಧ್ಯಕ್ಷ ಜಿ. ಹನುಮಂತಪ್ಪ ಮಾತನಾಡಿ, ಪಿಂಚಣಿ ಯೋಜನೆ ಪಡೆಯುವುದು ನಮ್ಮ ಮೂಲಭೂತ ಹಕ್ಕು ಇದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯಾಗಲೀ ಅಥವಾ ಕಾನೂನು ತೊಡಕಾಗಲಿ ಇಲ್ಲ. ಆದ್ದರಿಂದ ಸರ್ಕಾರ ಜಾರಿಗೊಳಿಸಿ ನೌಕರರ ಕಾಳಜಿ ವಹಿಸಬೇಕೆಂದು ಆಗ್ರಹಿಸಿದರು.
ನಾವೇನು ಸರ್ಕಾರದ ಆಸ್ತಿ ಕೇಳುತ್ತಿಲ್ಲ. ನಮ್ಮ ಹಕ್ಕನ್ನು ನಾವು ಪ್ರತಿಪಾದಿಸುತ್ತಿದ್ದೇವೆ. ಆದ್ದರಿಂದ, ನಮ್ಮ ಬೇಡಿಕೆಗೆ ಸ್ಪಂದಿಸಿ ಸರ್ಕಾರ ಕೂಡಲೇ ಪಿಂಚಣಿ ಯೋಜನೆ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಪಿಂಚಣಿ ಇಲ್ಲದಿದ್ದರೆ ಸರ್ಕಾರಿ ನೌಕರರು ನಿವೃತ್ತಿಯ ನಂತರ ಜೀವನಕ್ಕಾಗಿ ಕಷ್ಟಪಡುವಂತಾಗುತ್ತದೆ. ಪಿಂಚಣಿ ಅವಶ್ಯಕವಾಗಿದ್ದು, ಅದನ್ನು ಕೇಳುವುದು ನಮ್ಮ ಮೂಲಭೂತ ಹಕ್ಕು ಹೌದು. ಆದ್ದರಿಂದ ಸರ್ಕಾರ ನಮ್ಮ ಬೇಡಿಕೆ ಈಡೇರಿಸಬೇಕೆಂದು ಅವರು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಖಾಸಗಿ ಸಂಸ್ಥೆಗಳ ಹೋರಾಟಗಾರ ಜಾಲಮಂಗಳ ನಾಗರಾಜ್, ಬೋಧಕೇತರ ಸಂಘದ ರಾಜ್ಯಾಧ್ಯಕ್ಷ ಅರುಣಕುಮಾರ್, ರಾಜ್ಯ ಕಾರ್ಯದರ್ಶಿ ಮುತ್ತುರಾಜ್ ಮತ್ತಿಕೊಪ್ಪ, ರಾಜ್ಯ ಕೋಶಾಧ್ಯಕ್ಷ ಬಿ.ಜಿ. ಕೊರಗ, ಮಂಜುನಾಥ್ ಭತ್ತದ, ಕೆ. ಈಶಾನಾಯ್ಕ್, ಜಿಲ್ಲಾಧ್ಯಕ್ಷ ಮಂಜನಾಯ್ಕ್, ಎಸ್.ಎಂ. ಮಡಿವಾಳರ್, ಬಿ.ಐ. ಹುಗ್ಗಿ, ಎಸ್.ಹೆಚ್. ಮಲ್ಲಮ್ಮನವರ್, ಕೆ.ಸಿ. ಶ್ರೀನಿವಾಸಮೂರ್ತಿ, ಆರ್. ನಾಗೇಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.