ವರುಣನಿಗಾಗಿ ದೇವರಿಗೆ ಜಲ ದಿಗ್ಬಂಧನ

ಎಂ.ಕೆ.ಹುಬ್ಬಳ್ಳಿ (ಬೆಳಗಾವಿ ಜಿಲ್ಲೆ): ಮಳೆಗಾಗಿ ಪ್ರಾರ್ಥಿಸಿ ದೇವರಿಗೆ ಪೂಜೆ,ಪ್ರಾರ್ಥನೆ, ಕಪ್ಪೆ,ಕತ್ತೆಗಳಿಗೆ ಮದುವೆ ಮಾಡುವುದು ಸಾಮಾನ್ಯ. ಆದರೆ,ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಎಂ.ಕೆ. ಹುಬ್ಬಳ್ಳಿ ಪಟ್ಟಣದ ಭಕ್ತರು ದೇವರಿಗೇ ಜಲ ದಿಗ್ಬಂಧನ ಹಾಕಿದ್ದಾರೆ.
ಪಟ್ಟಣದ ಸೂರ್ಯ ನಾರಾಯಣ ದೇವರ ಮೂರ್ತಿಯ ಸುತ್ತಲೂ ನೀರು ಹಾಕಿ ಜಲ ದಿಗ್ಬಂಧನ ಹಾಕಿದರು. ಇದಕ್ಕಾಗಿ ಮಲಪ್ರಭಾ ನದಿಯಿಂದ ನೀರು ಹೊತ್ತು ತಂದರು. ಬುಧವಾರ ರಾತ್ರಿಯಿಂದಲೇ ಜಾಗರಣೆ ನಡೆಸಿ, ಭಜನೆ, ಪ್ರಾರ್ಥನೆ ಮಾಡಿದರು.
ಗುರುವಾರ ಬೆಳಿಗ್ಗೆ ದೇವರಿಗೆ ಜಲ ದಿಗ್ಬಂಧನ ಮಾಡಿ, ಮಳೆಗಾಗಿ ಪ್ರಾರ್ಥಿಸಿ ದೇವಸ್ಥನದ ಬಾಗಿಲು ಮುಚ್ಚಿದರು. ಮಳೆಯಾಗುವ ತನಕ ಗರ್ಭಗುಡಿಯ ಬಾಗಿಲು ತೆರೆಯದಿರಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಈ ಪದ್ಧತಿ ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದಿದೆ.ಹಿಂದೆ ಸಾಕಷ್ಟು ಸಲ ಮಳೆಗಾಗಿ ಪ್ರಾರ್ಥಿಸಿ ಹೀಗೆ ದೇವಸ್ಥಾನದ ಗರ್ಭಗುಡಿಯಲ್ಲಿ ನೀರು ತುಂಬಿಸಿ, ಬಾಗಿಲು ಮುಚ್ಚಿದ್ದೇವೆ. ಆಗ ಉತ್ತಮ ಮಳೆಯಾಗಿದೆ ಎಂದು ಊರ ಹಿರಿಯರು ಮಾಹಿತಿ ನೀಡಿದರು.