ಪೇಜಾವರ ಶ್ರೀ : ದಯಾಮಯಿ, ದೈವಸ್ವರೂಪಿ, ಬಾವಿಗಿಳಿದು ಬೆಕ್ಕು ರಕ್ಷಿಸಿದ್ದೇ ರೋಚಕ ! ಅಚ್ಚರಿಗೊಂಡ ಭಕ್ತ ವೃಂದ ;

ಉಡುಪಿ: ದಯಾಮಯಿ , ಸಕಲ ಜೀವಿಗಳಿಗೂ ಲೆಸನ್ನೆ ಬಯಸುವ ಪೇಜಾವರ ಶ್ರೀ ಗಳು ಸಮಾಜಕ್ಕೆ ಕಂಟಕ ಎದುರಾದಾಗ ಸಮಸ್ಯೆ ಬಗೆಹರಿಸಲು ತಾವೇ ನಿಂತು ಹೋರಾಟ ನಡೆಸುತ್ತಾರೆ ಎಂಬುದಕ್ಕೆ ಇದೊಂದು ಜೀವಂತ ನಿದರ್ಶನವಾಗಿದೆ. ಕೆಲವೊಮ್ಮೆ ತಮ್ಮ ಪವಾಡಗಳ ಮೂಲಕ ಶಿಷ್ಯ ಸಮುದಾಯವನ್ನು ಚಕಿತಗೊಳಿಸದ್ದೂ ಇದೆ. ಇದೀಗ ಪೇಜಾವರ ಶ್ರೀಗಳು ಮೂಕ ಪ್ರಾಣಿಯನ್ನು ರಕ್ಷಿಸಲು ಮುಂದಾದ ಧೈರ್ಯದ ನಡೆ ನೋಡುಗರನ್ನು ನಿಬ್ಬೆರಗಾಗಿಸಿದೆ.
ಉಡುಪಿಯ ಪೇಜಾವರ ಮಠಾಧೀಶರು ಕೃಷ್ಣ ಮಠ ಸಮೀಪ ಇರುವ ಬಾವಿಯೊಂದಕ್ಕೆ ಬೆಕ್ಕಿನ ಮರಿ ಬಿದ್ದು ಅದು ಸಾವು ಬದುಕಿನ ಮಧ್ಯೆ ಹೋರಾಡುವಾಗ ಬೆಕ್ಕನ್ನು ರಕ್ಷಿಸಲು ತಾವೇ ಬಾವಿಗಿಳಿದರು. ಕಾವಿ ತೊಟ್ಟಿರುವ ಶ್ರೀಗಳು ತಮ್ಮ ಕಾವಿ ವಸ್ತ್ರವನ್ನು ಕಳಚಿ ದಿಢೀರನೆ ಬಾವಿಗಿಳಿದ ವೈಖರಿಯು ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
ಮಠದ ಸಮೀಪದ ಬಾವಿಯೊಂದಕ್ಕೆ ಬೆಕ್ಕಿನ ಮರಿ ಬಿದ್ದಿತ್ತು. ಪ್ರಾಣಸಂಕಟದಲ್ಲಿದ್ದ ಮರಿಯ ಮೂಕ ವೇದನೆಯನ್ನು ಗಮನಿಸಿದ ಶ್ರೀಗಳು, ಬಾವಿಯ ಹಗ್ಗವನ್ನು ಗಟ್ಟಿಗೊಳಿಸಿ ತಾವೇ ಬಾವಿಗಿಳಿದರು. ಸುಮಾರು 40 ಅಡಿ ಆಳದ ಬಾವಿಗೆ ಇಳಿದು ಬೆಕ್ಕಿನ ಮರಿಯನ್ನು ಸಾವಿನ ದವಡೆಯಿಂದ ಪಾರು ಮಾಡಿದರು. ಶ್ರೀಗಳ ಈ ನಡೆ, ಕ್ಷಿಪ್ರ ನಿರ್ಧಾರ ಮತ್ತು ಅವರಲ್ಲಿರುವ ಧೈರ್ಯ ಇಂದಿನ ಯುವಪೀಳಿಗೆಗೆ ಪ್ರೇರಣೆಯಾಗಿದೆ. ಬಾವಿಗಿಳಿದ ವೈಖರಿ ಶಿಷ್ಯ ಸಮುದಾಯದಲ್ಲಿ ಅವರ ಮೇಲಿನ ಭಕ್ತಿ ಇಮ್ಮಡಿಗೊಳಿಸುವಂತೆ ಮಾಡಿದೆ.