ಮತಾಂತರ ನಿಷೇಧ ಕಾಯ್ದೆ ರದ್ದು ಸರ್ಕಾರದ ತೀರ್ಮಾನ ಸ್ವಾಗತಾರ್ಹ – ಜಸ್ಟೀನ್ ಜಯಕುಮಾರ್
ದಾವಣಗೆರೆ: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿವಾದಿತ ಕರ್ನಾಟಕ ಧಾರ್ಮಿಕ ಸಂರಕ್ಷಣಾ ಹಕ್ಕು ಅಧಿನಿಯಮ-2022 (ಮತಾಂತರ ನಿಷೇಧ ಕಾಯ್ದೆ)ಯನ್ನು ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡು ಮತಾಂತರ ಕಾಯ್ದೆಯನ್ನು ರದ್ದು ಮಾಡಿತ್ತು ಇದೀಗ ಕಾಂಗ್ರೆಸ್ ಸರ್ಕಾರ ಆ ಕಾಯ್ದೆಯನ್ನು ಹಿಂಪಡೆದಿದೆ.
ಭಾರೀ ವಿರೋಧದ ನಡುವೆ ವಿಧಾನಸಭೆಯಲ್ಲಿ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಜಾರಿಗೊಳಿಸಿತ್ತು. ಸದರಿ ಕಾಯ್ದೆಯು ಮತೀಯ ಅಲ್ಪಸಂಖ್ಯಾತ ಗುರಿಯಾಗಿಸಿಕೊಂಡು ಮಾಡಿದ ಕಾಯ್ದೆ ಮಾತ್ರವಲ್ಲದೇ ವಿಶೇಷವಾಗಿ ಕ್ರೈಸ್ತ ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡಿ ಅನಗತ್ಯವಾದ ಕೋಮು-ಗಲಭೆ ಸೃಷ್ಟಿಸಿ ಸುಳ್ಳು ಪ್ರಕರಣವನ್ನು ದಾಖಲಿಸಿರುವುದಕ್ಕೆ ಎಲ್ಲಾ ರೀತಿಯ ಅನುಕೂಲತೆಗಳನ್ನು ಕಾಯ್ದೆಯಲ್ಲಿ ಅವಕಾಶ ಮಾಡಿಕೊಟ್ಟು ಈ ಕಾಯ್ದೆಯನ್ನು ಜಾರಿ ಮಾಡುವ ಮೂಲಕ ಬಿಜೆಪಿ ಅಂಗ ಸಂಸ್ಥೆಗಳಾದ ಆರ್.ಎಸ್.ಎಸ್. ಸಂಘ ಪರಿವಾರ ಇವರ ಕೈಗೆ ಲೈಸನ್ಸ್ ನೀಡಿದಂತಾಗಿತ್ತು.
ಸದರಿ ಕಾಯ್ದೆಯನ್ನು ಉಲ್ಲಂಘಿಸಿದರೆ 3 ರಿಂದ 10 ವರ್ಷ ಜೈಲುವಾಸ, ಕನಿಷ್ಠ ರೂ.25,000/- ರಿಂದ ಗರಿಷ್ಠ ರೂ.5,00,000/-ಗಳ ವರೆಗೆ ದಂಡ ಪಾವತಿ ಹಾಗೂ ಸದರಿ ಮತಾಂತರದ ದೂರನ್ನು ಯಾರು ಬೇಕಾದರೂ ದಾಖಲು ಮಾಡಬಹುದು ಎಂದು ಕಾಯ್ದೆಯನ್ನು ರೂಪಿಸಲಾಗಿತ್ತು.
ಕಾಯ್ದೆ ಇನ್ನೂ ರಾಜ್ಯಪಾಲರ ಅಂಕಿತಕ್ಕೆ ಹೋಗುವ ಮೊದಲೇ ರಾಜ್ಯದಲ್ಲಿ ಅನೇಕ ಕಡೆ ಚರ್ಚುಗಳ ಫಾದರ್, ಫಾಸ್ತ್ರೀ ಹಾಗೂ ಧಾರ್ಮಿಕ ಮುಖಂಡರುಗಳ ಮೇಲೆ ಈ ಸುಳ್ಳು ದೂರುಗಳನ್ನು ದಾಖಲಾಗಿಸುವ ಮೂಲಕ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗಿತ್ತು ಹಾಗೂ ಕರ್ನಾಟಕ ರಾಜ್ಯಾದ್ಯಂತ ಅನೇಕ ಕಡೆಗಳಲ್ಲಿ ಮತಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಸುಖಾ ಸುಮ್ಮನೆ ಕೇಸುಗಳು ದಾಖಲಾಗಿದ್ದವು.
ಸದರಿ ಘಟನೆಗಳಿಂದ ಅಲ್ಪಸಂಖ್ಯಾತ ಸಮುದಾಯದಲ್ಲಿ ಅಭದ್ರತೆಯ ಭಾವನೆ ಮೂಡಿತ್ತು ಹಾಗೂ ಸದರಿ ಮತಾಂತರ ನಿಷೇಧ ಕಾಯ್ದೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಭಾರತ ಸಂವಿಧಾನದ ಅನುಚ್ಛೇದ 25 ರ ಧಾರ್ಮಿಕ ಸ್ವಾತಂತ್ರ್ಯವನ್ನು ನಿಷಕ್ರೀಯಗೊಳಿಸುವ ಬಿಜೆಪಿ ಹಾಗೂ ಸಂಘ ಪರಿವಾರದ ಅಜೆಂಡಾವಾಗಿತ್ತು. ಬಿಜೆಪಿ ಮತ್ತು ಸಂಘ ಪರಿವಾರದ ಷಡ್ಯಂತ್ರದಿಂದಾಗಿ ಮತಾಂತರ ನಿಷೇಧ ಕಾಯ್ದೆಯಿಂದ ಅನೇಕ ಅಲ್ಪಸಂಖ್ಯಾತ ಬಂಧುಗಳು ತೊಂದರೆ ಗೊಳಗಾಗಿದ್ದಲ್ಲದೇ ಸುಳ್ಳು ಕೇಸುಗಳು ತಮ್ಮ ಮೇಲೆ ದಾಖಲು ಮಾಡಿಸಿಕೊಂಡು ತಾವು ಮಾಡದ ತಪ್ಪಿಗೆ ವಿನಾಕಾರಣ ಪೊಲೀಸ್ ಸ್ಟೇಷನ್, ಕೋರ್ಟ್-ಕಛೇರಿ, ಜೈಲು ವಾಸಗಳನ್ನು ಸಹ ಅನುಭವಿಸುವಂತಾಗಿತ್ತು.
ಅನೇಕ ಬಾರಿ ಕ್ರೈಸ್ತ ಫಾದರ್‌ಗಳು ಹಾಗೂ ಮುಖಂಡರುಗಳು ಅಂದಿನ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಹಾಗೂ ಅದರ ವಿರೋಧ ಪಕ್ಷದ ನಾಯಕರಾಗಿದ್ದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ, ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಹಾಗೂ ಕೆ.ಜೆ. ಜಾರ್ಜ್ ಇನ್ನಿತರೆ ಹಿರಿಯ ಮುಖಂಡರುಗಳನ್ನು ಭೇಟಿಯಾಗಿ ತಮ್ಮ ಅಹವಾಲನ್ನು ನೀಡಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಕೋಮು-ದ್ವೇಷ ಹೆಚ್ಚಿಸಲು ಮಾಡಿರುವ ಕಾಯ್ದೆಯನ್ನು ಹಿಂಪಡೆಯಬೇಕೆಂದು ಮನವಿ ಸಲ್ಲಿಸಿದ್ದರು.
ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಸದರಿ ವಿವಾದಿತ ಕಾಯ್ದೆಯನ್ನು ಹಿಂಪಡೆಯುವುದಾಗಿ ಘೋಷಿಸಿತ್ತು. ಅದರಂತೆಯೇ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ದಿನಾಂಕ: 15-06-2023 ರಂದು ನಡೆದ ಸಂಪುಟ ಸಭೆಯಲ್ಲಿ ವಿವಾದಿತ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯಲು ಸಂಪುಟ ಒಪ್ಪಿದ್ದು ಅದನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ರವರು ಸುದ್ಧಿಗೋಷ್ಠಿಯಲ್ಲಿ ಪ್ರಕಟಿಸಿದರು. ಈ ಸಂಬಂಧ ಜುಲೈ 3 ರಿಂದ ಆರಂಭವಾಗಲಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ತಿದ್ದುಪಡಿ ವಿಧೇಯಕ ಮಂಡಿಸಲಾಗುವುದು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ರಾಜ್ಯ ಸಚಿವರ ಸಂಪುಟದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಒಳಗೊಂಡಂತೆ ಎ.ಪಿ.ಎಂ.ಸಿ. ತಿದ್ದುಪಡಿ ಕಾಯ್ದೆ ಹಾಗೂ ಶಾಲಾ ಕಾಲೇಜುಗಳ ಪಠ್ಯಕ್ರಮದಲ್ಲಿ ಅನಗತ್ಯವಾಗಿ ಯುವ ಪೀಳಿಗೆಯಲ್ಲಿ ಕೋಮು-ಸಾಮರಸ್ಯ ಕದಡುವ, ಭಾತೃತ್ವದ ಭಾವನೆ ಕೆಡಿಸುವ ಉದ್ದೇಶದಿಂದ ಸೇರಿಸಿರುವ ಕೆಲವು ವಿವಾದಿತ ಕೇಸರಿಕರಣ ಹುನ್ನಾರದ ಪಠ್ಯಕ್ರಮಗಳನ್ನು ಸಹ ತೆಗೆದು ಹಾಕಿರುವುದು ಶ್ಲಾಘನೀಯ ಹಾಗೂ ಸ್ವಾಗತಾರ್ಹ ಕ್ರಮವಾಗಿದ್ದು.
“ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದುಕೊಂಡಿರುವುದಕ್ಕೆ” ಕರ್ನಾಟಕ ಕ್ರಿಶ್ಚಿಯನ್ ಲೀಗ್ ಹಾಗೂ ಕ್ರೈಸ್ತ ಚಿಂತಕರ ಚಾವಡಿ ಸಂಸ್ಥೆಗಳು ಹಾಗೂ ಇಡೀ ಕ್ರೈಸ್ತ ಮತ್ತು ಅಲ್ಪಸಂಖ್ಯಾತ ಸಮುದಾಯ ಹರ್ಷಗೊಂಡಿದೆ. ಸದರಿ ರಾಜ್ಯ ಸರ್ಕಾರದ ಕ್ರಮಕ್ಕೆ ಸನ್ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹಾಗೂ ಸಚಿವ ಸಂಪುಟದ ಎಲ್ಲಾ ಸಚಿವರಿಗೂ ಕೃತಜ್ಞತೆ ಸಲ್ಲಿಸಿದೆ.
ಇನ್ನು ಮುಂದೆ ಕರ್ನಾಟಕದಲ್ಲಿ ಮತೀಯ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ಶೋಷಿತ ವರ್ಗಗಳು ನೆಮ್ಮದಿಯಿಂದ ಜೀವನ ಮಾಡುವಂತಹ ವಾತಾವರಣ ರೂಪಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಕ್ರೈಸ್ತ ಸಮಾಜದ ಕರ್ನಾಟಕ ಕ್ರಿಸ್ಚಿಯನ್ ಲೀಗ್‌ನ ರಾಜ್ಯ ಸಂಚಾಲಕ ಜಸ್ಟೀನ್ ಜಯಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.