Egg : ಶಾಲಾ ಮಕ್ಕಳಿಗೆ ಇನ್ನುಮುಂದೆ ವಾರಕ್ಕೊಂದು ಮೊಟ್ಟೆ ಮಾತ್ರ

ಬೆಂಗಳೂರು : ಶಾಲಾ ಮಕ್ಕಳಿಗೆ ಈ ಹಿಂದೆ ವಾರಕ್ಕೆ ಎರಡು ಮೊಟ್ಟೆಗಳನ್ನು ನೀಡುತ್ತಿದ್ದು, ಈ ವರ್ಷದಿಂದ ಒಂದು ಮೊಟ್ಟೆಯನ್ನು ಕಾಂಗ್ರೆಸ್ ಸರ್ಕಾರ ಕಡಿತಗೊಳಿಸಿದೆ. ರಾಜ್ಯದ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 1-8ನೇ ತರಗತಿ ವಿದ್ಯಾರ್ಥಿಗಳಿಗೆ ವಾರಕ್ಕೆ ಒಂದು ಮೊಟ್ಟೆಯನ್ನು ಮಾತ್ರ ನೀಡಲು ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿ ಆದೇಶವನ್ನು ಹೊರಡಿಸಿದೆ.
ಕಳೆದ ವರ್ಷ ಪ್ರಧಾನಮಂತ್ರಿ ಪೋಷಣ್ ಅಭಿಯಾನ, ರಾಜ್ಯ ಸರ್ಕಾರದ ಪೌಷ್ಠಿಕ ಆಹಾರ ವಿತರಣೆಗೆ ವಾರಕ್ಕೆ 2 ಬಾರಿ ನೀಡಲಾಗುತ್ತಿತ್ತು. ಅಂದರೆ ಬಿಸಿಯೂಟದೊಂದಿಗೆ ಪ್ರತಿ ಮಂಗಳವಾರ, ಶುಕ್ರವಾರ ಮೊಟ್ಟೆ ನೀಡಲಾಗುತ್ತಿತ್ತು. ಆದರೆ, ಈ ವರ್ಷ ವಾರಕ್ಕೊಮ್ಮೆ ಮಾತ್ರ ಮೊಟ್ಟೆ ನೀಡಲು ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ.
ಕಲ್ಯಾಣ ಕರ್ನಾಟಕ ವಿಭಾಗದ 08 ಜಿಲ್ಲೆಗಳಾದ ಯಾದಗಿರಿ, ಕಲಬುರಗಿ, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಬೀದರ್ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮೊಟ್ಟೆ ವಿತರಣೆ ಯೋಜನೆ ಯಶಸ್ವಿಯಾಗಿತ್ತು. ಮಕ್ಕಳ ಅಪೌಷ್ಠಿಕತೆ ನಿವಾರಣೆಯಲ್ಲೂ ಅನುಕೂಲವಾಗಿತ್ತು. ಆದರೆ, ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಾರಕ್ಕೊಂದೇ ಮೊಟ್ಟೆಯನ್ನು ನೀಡಲು ಶಿಕ್ಷಣ ಇಲಾಖೆ ಆದೇಶಿಸಿದೆ. ಜೊತೆಗೆ, ಪ್ರತಿ ಮೊಟ್ಟೆ 6 ರೂ.ನಂತೆ ದರ ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ.