ಯೋಗ ದಿನ : ದೇವನಗರಿಯಲ್ಲಿ ಸಾವಿರಾರು ಜನರಿಂದ ಯೋಗಾಭ್ಯಾಸ

ದಾವಣಗೆರೆ: 9ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ‘ವಿಶ್ವ ಕುಟುಂಬಕ್ಕಾಗಿ ಯೋಗ’ ಘೋಷವಾಕ್ಯದಡಿ ಜಿಲ್ಲಾಡಳಿತವು ವಿವಿಧ ಸಮಿತಿ, ಸಂಘಟನೆಗಳ ಸಹಯೋಗದಲ್ಲಿ ಇಲ್ಲಿನ ದೇವರಾಜ್ ಅರಸ್ ಬಡಾವಣೆಯಲ್ಲಿರುವ ಈಜುಕೊಳ ಹತ್ತಿರದ ಮೈದಾನದಲ್ಲಿ ಬುಧವಾರ ನಡೆದ ಯೋಗ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಸಾಮೂಹಿಕ ಯೋಗಾಭ್ಯಾಸ ನಡೆಸಿದರು.
ಯೋಗ ಗುರು ವೈದ್ಯ ಶ್ರೀ ಚನ್ನಬಸವ ಸ್ವಾಮೀಜಿ ನೇತೃತ್ವದಲ್ಲಿ 40 ನಿಮಿಷಗಳ ಕಾಲ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲಾ ವಯೋಮಾನದವರೂ ಯೋಗಾಭ್ಯಾಸ ನಡೆಸಿದರು.
ಸಂಸದ ಜಿ.ಎಂ.ಸಿದ್ದೇಶ್ವರ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಕೆ.ಇಟ್ನಾಳ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ, ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಗಾಭ್ಯಾಸ ನಡೆಸಿದರು.
ಉಪಾಹಾರದ ವ್ಯವಸ್ಥೆ: ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ತಟ್ಟೆ ಇಡ್ಲಿ, ಚಟ್ನಿ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ತಟ್ಟೆ ಇಡ್ಲಿ ಖಾಲಿಯಾದಾಗ ಎರಡು ಬಾರಿ ಉಪ್ಪಿಟ್ಟು ತಯಾರಿಸಿ ಬಡಿಸಲಾಯಿತು.