ನಮ್ಮ ಮನೆಯ ಮಕ್ಕಳಂತೆ ಹಾಸ್ಟೆಲ್ ವಿದ್ಯಾರ್ಥಿನಿಯರನ್ನ ನೋಡಿಕೊಳ್ಳಿ – ಶಾಸಕ ಬಸವರಾಜು ವಿ ಶಿವಗಂಗಾ

ದಾವಣಗೆರೆ:ಚನ್ನಗಿರಿ ಪಟ್ಟಣದ ಸರ್ಕಾರಿ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಶಾಸಕರಾದ ಬಸವರಾಜು ವಿ ಶಿವಗಂಗಾ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು,ಬಸವೇಶ್ವರ ನಗರದ ಪೊಲೀಸ್ ಕ್ವಾರ್ಟರ್ಸ್ ಬಳಿಯಿರುವ ಹಾಸ್ಟೇಲ್ ಗೆ ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ಚರ್ಚೆ ನಡೆಸಿದರು, ಹಾಸ್ಟೆಲ್ ನಲ್ಲಿ ನೀಡುತ್ತಿರುವ ಆಹಾರ ಕುರಿತು ವಿದ್ಯಾರ್ಥಿನಿಯರೊಂದಿಗೆ ಶಾಸಕರಾದ ಬಸವರಾಜು ವಿ ಶಿವಗಂಗಾ ಮಾಹಿತಿ ನೀಡಿದರು. ಇದೇವೇಳೆ ವಿದ್ಯಾರ್ಥಿನಿಯರಿಗೆ ವಿತರಣೆ ಮಾಡುವ ಆಹಾರವನ್ನು ಸ್ವತಃ ಪರೀಕ್ಷೆ ಮಾಡಿದರು.
ಶಾಸಕರ ಭೇಟಿ ಸಂದರ್ಭದಲ್ಲಿ ವಾರ್ಡನ್ ಅನುಪಸ್ಥಿತಿಯಿದ್ದು ನಂತರ ಅವರಿಗೆ ಕರೆ ಮಾಡಿ ಖಡಕ್ ಎಚ್ಚರಿಕೆ ನೀಡಿದರು, ಗುಣಮಟ್ಟದ ಆಹಾರ ನೀಡಬೇಕೆಂದು ಹಾಸ್ಟೇಲ್ ವಾರ್ಡನ್ ಹಾಗೂ ಸಿಬ್ಬಂದಿಗೆ ಸೂಚಿಸಿದರು, ಲೋಪ ಕಂಡುಬಂದರೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಅಡುಗೆಗೆ ಬಳಸುವ ಆಹಾರ ಪದಾರ್ಥದ ಗುಣಮಟ್ಟ ಪರೀಕ್ಷೆ ಮಾಡಬೇಕು, ಆಹಾರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದರೂ ನೀವೇ ಜವಾಬ್ದಾರರು, ಓದುವ ಬಡ ವಿದ್ಯಾರ್ಥಿನಿಯರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು. ಸರ್ಕಾರದಿಂದ ಒದಗಿಸುವ ಎಲ್ಲಾ ಸೌಲಭ್ಯ ವಿದ್ಯಾರ್ಥಿಗಳಿಗೆ ತಲುಪಬೇಕು, ಊಟದ ಸಂದರ್ಭದಲ್ಲಿ ವಾರ್ಡನ್ ಕಡ್ಡಾಯವಾಗಿ ಹಾಸ್ಟೆಲ್ ನಲ್ಲಿರಬೇಕು, ಶುದ್ಧ ಕುಡಿಯುವ ನೀರನ್ನ ಒದಗಿಸಬೇಕು, ಶೌಚಾಲಯ ಸೇರಿದಂತೆ ಅಡುಗೆ ಮನೆಯನ್ನ ಸ್ವಚ್ಛವಾಗಿಡಬೇಕು. ನಮ್ಮ ಮನೆ ಹಾಗೂ ಮಕ್ಕಳಂತೆ ಹಾಸ್ಟೇಲ್ ನಲ್ಲಿರುವ ವಿದ್ಯಾರ್ಥಿನಿಯರನ್ನ ನೋಡಿಕೊಳ್ಳಬೇಕೆಂದು ಶಾಸಕರಾದ ಬಸವರಾಜು ವಿ ಶಿವಗಂಗಾ ಸೂಚಿಸಿದರು.
ಹಾಸ್ಟೆಲ್ ನಲ್ಲಿ ಸಿಬ್ಬಂದಿಗಳಿಗೆ ಹಾಜರಾತಿ ಕಡ್ಡಾಯ, ಬಯೋಮೆಟ್ರಿಕ್ ಹಾಕಿಸುವಂತೆ ವಾರ್ಡನ್ ಅವರಿಗೆ ಸೂಚಿಸಿದರು. ಕರ್ತವ್ಯ ಲೋಪ ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಶಾಸಕರು ಮೊದಲ ಬಾರಿಗೆ ಹಾಸ್ಟೆಲ್ ಗೆ ಭೇಟಿ ನೀಡಿದ್ದ ಹಿನ್ನೆಲೆ ವಿದ್ಯಾರ್ಥಿನಿಯರು ಫುಲ್ ಖುಷಿಯಾದರು.