ಬಿಜೆಪಿ ಸರ್ಕಾರದ ಅವಧಿಯಲ್ಲಿ 1.7 ಲಕ್ಷ ಕೋಟಿ ಲೂಟಿ? ಭ್ರಷ್ಟಾಚಾರ ಆರೋಪಗಳ ಬಗ್ಗೆ ತನಿಖೆಗೆ ಆಗ್ರಹ; ಸಿಎಂ ಸಿದ್ದರಾಮಯ್ಯರಿಗೆ ಸಿಟಿಜನ್ ರೈಟ್ಸ್ ಫೌಂಡೇಶನ್ ದೂರು
ಬೆಂಗಳೂರು: ಬಿಜೆಪಿ ನಾಯಕರಿಗೆ ಶಾಕ್ ಕೊಡಲು ವೇದಿಕೆ ಸಜ್ಜಾದಂತಿದೆ. ಕಳೆದ ವಿಧಾನಸಭಾ ಅವಧಿಯಲ್ಲಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ 40% ಆರೋಪ ಕೇಳಿಬಂದಿತ್ತು. ಈ ಆರೋಪವನ್ನು ಮುಂದಿಟ್ಟು ಪ್ರತಿಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ್ ಸುದೀರ್ಘ ಹೋರಾಟ ಮಾಡಿ ಸಮಗ್ರ ತನಿಖೆಗೆ ಆಗ್ರಹಿಸಿತ್ತು. ಆದರೆ ಬೊಮ್ಮಾಯಿ ಸರ್ಕಾರ ತನಿಖೆ ನಡೆಸಿಲ್ಲ. ಈ ಆರೋಪಗಳನ್ನೇ ಅಸ್ತ್ರವನ್ನಾಗಿಸಿ ಚುನಾವಣಾ ಎದುರಿಸಿದ್ದ ಕಾಂಗ್ರೆಸ್ ಇದೀಗ ಗೆದ್ದು ಅಧಿಕಾರಕ್ಕೇರಿದೆ. ಇದೇ ಸಂದರ್ಭದಲ್ಲಿ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಕಾನೂನು ಹೋರಾಟದಲ್ಲಿ ಮುಂಚೂಣಿಯಲ್ಲಿರುವ ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಸಿದ್ದರಾಮಯ್ಯ ಸರ್ಕಾರಕ್ಕೆ ದೂರು ನೀಡಿ, ತಮ್ಮ ಪಕ್ಷ ಈ ಹಿಂದೆ ಮಾಡಿರುವ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ತನಿಖೆ ನಡೆಸುವಂತೆ ಕೋರಿದೆ.
‘ಸಿಟಿಜನ್ ರೈಟ್ಸ್ ಫೌಂಡೇಶನ್’ ಅಧ್ಯಕ್ಷ ಕೆ. ಎ ಪಾಲ್, ಅವರು ಈ ದೂರು ನೀಡಿದ್ದು, ಕಾಮಗಾರಿಗಳಲ್ಲಿನ ಶೇ 40 ಕಮೀಷನ್ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಪ್ರಮುಖರು ಪ್ರಧಾನಿಯವರಿಗೆ ನೀಡಿರುವ ದೂರನ್ನು ಮುಂದಿಟ್ಟು ಕಾಂಗ್ರೆಸ್ ಹೋರಾಟ ಮಾಡಿರುವ ಬಗ್ಗೆ ಗಮನಸೆಳೆದಿದ್ದಾರೆ. ‘40% ಕಮೀಷನ್ ಸರ್ಕಾರದ ವಿರುದ್ದ ಕ್ರಮ ಕೈಗೊಳ್ಳಿ, ಎಂದು ಕೋರಿ ತಾವು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರು ಪ್ರಧಾನಿಗೆ ಪತ್ರ ಬರೆದಿದ್ದೀರಿ.
‘40% ಸರ್ಕಾರ – ಬಿಜೆಪಿ ಅಂದ್ರೆ ಭ್ರಷ್ಟಾಚಾರ’ ಎಂಬ ಅಭಿಯಾನವನ್ನು ನಡೆಸಿರುವಿರಿ. ‘ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ, ಪಿಡಬ್ಲೂಡಿ ಗುತ್ತಿಗೆಯಲ್ಲಿ 40%, ಮಠಗಳ ಅನುದಾನದಲ್ಲಿ 30%, ಸಲಕರಣೆ ಖರೀದಿಯಲ್ಲಿ 40%’ ಎಂದು ಕಮೀಷನ್ ಆರೋಪ ಮಾಡಿರುವಿರಿ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳ ವಿರುದ್ದದ ಜನಾಂದೋಲನಕ್ಕಾಗಿ 8447704940 ಸಂಖ್ಯೆಯ ಸಹಾಯವಾಣಿಯನ್ನೂ ಪ್ರಾರಂಭಿಸಿರುವಿರಿ. ಜೊತೆಗೆ ‘ಲಂಚದ ಪಟ್ಟಿ’ಯನ್ನೂ ಬಿಡುಗಡೆ ಮಾಡಿರುವಿರಿ. ಆದರೆ ಹಿಂದಿನ ಸರ್ಕಾರ ಸಮರ್ಪಕ ತನಿಖೆ ನಡೆಸಿಲ್ಲ. ಇದೀಗ ಈ ಹಗರಣಗಳ ವಿರುದ್ಧ ಹೋರಾಟನಡೆಸಿರುವ ನೀವೇ ಸಿಎಂ ಆಗಿದ್ದು, ತನಿಖೆಗೆ ಕ್ರಮ ಕೈಗೊಳ್ಳಿ ಎಂದು ಕೋರಿದ್ದಾರೆ.
ಚುನಾವಣಾ ಪೂರ್ವದಲ್ಲಿ ಸರ್ಕಾರದ ಡೀಲ್’ಗಳ ಹಾಗೂ ಶೇಕಡಾವಾರು ಲಂಚದ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು. ಕೋವಿಡ್ ಕಿಟ್ ಪೂರೈಕೆ – 75%, ಲೋಕೋಪಯೋಗಿ ಒಪ್ಪಂದ- 40%, ಮಠಕ್ಕೆ ಅನುದಾನ -40%, ಉಪಕರಣಗಳ ಪೂರೈಕೆ -40%, ಮೊಟ್ಟೆ ಪೂರೈಕೆ -30% ಬಗ್ಗೆ ಈ ದೂರಿನಲ್ಲಿ ನೆನಪಿಸಲಾಗಿದೆ.
ಇದೇ ವೇಳೆ, ಹುದ್ದೆಗಳ ನೇಮಕಾತಿ ಹಾಗೂ ವರ್ಗಾವಣೆಗಳಿಗೆ ಲಂಚ ನಿಗದಿ ಬಗ್ಗೆ ಕಾಂಗ್ರೆಸ್ ಬಿಡುಗಡೆ ಮಾಡಿದ್ದ ಪಟ್ಟಿಯನ್ನೂ ಈ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬೆಸ್ಕಾಂ -1 ಕೋಟಿ, ಪ್ರಾಧ್ಯಾಪಕ- 70 ಲಕ್ಷ, ಉಪನ್ಯಾಸಕ – 50 ಲಕ್ಷ, ಎಫ್‌ಡಿಎ -30 ಲಕ್ಷ, ಬಮುಲ್ -25 ಲಕ್ಷ, ಪೊಲೀಸ್ ಕಾನ್ಸ್‌ಟೇಬಲ್ – 8 ಲಕ್ಷ, ಬಿಡಿಎ ಆಯುಕ್ತ -15 ಕೋಟಿ, ಕೆಪಿಎಸ್‌ಸಿ ಅಧ್ಯಕ್ಷ-16 ಕೋಟಿ, ಕುಲಪತಿ – 10 ಕೋಟಿ, ಡಿಸಿ, ಎಸ್‌ಪಿ- 16 ಕೋಟಿ, ಎಸಿ, ತಹಶಿಲ್ದಾರ್ – 3 ಕೋಟಿ, ಉಪನೋಂದಣಾಧಿಕಾರಿ -5 ಕೋಟಿ ಲಂಚ ನಿಗದಿ ಬಗ್ಗೆ ಕಾಂಗ್ರೆಸ್ ಬಿಡುಗಡೆ ಮಾಡಿದ್ದ ಪಟ್ಟಿಯನ್ನೇ ಮುಂದಿಟ್ಟು ಸಿಟಿಜನ್ ರೈಟ್ಸ್ ಫೌಂಡೇಶನ್ ಅಧ್ಯಕ್ಷ ಕೆ. ಎ. ಪಾಲ್ ಈ ದೂರು ನೀಡಿದ್ದಾರೆ.
‘PayCM, SayCM’ ಅಭಿಯಾನವನ್ನೂ ಕಾಂಗ್ರೆಸ್ ಆರಂಭಿಸಿತ್ತು. ಜೊತೆಗೆ ಮಾರ್ಚ್ 9ರಂದು ‘ಕರ್ನಾಟಕ ಬಂದ್’ಗೆ ಕರೆ ಕೊಟ್ಟಿತ್ತು. ‘ರೇಟ್ ಕಾರ್ಡ್’ ಬಿಡುಗಡೆ ಮಾಡಿ, ‘ಕಳೆದ ನಾಲ್ಕೇ ವರ್ಷಗಳಲ್ಲಿ 40% ಸರ್ಕಾರ ಕನ್ನಡಿಗರಿಂದ 1,50,000 ಕೋಟಿಗೂ ಹೆಚ್ಚು ಹಣ ಲೂಟಿ ಮಾಡಿದೆ ಎಂದೂ ಪ್ರತಿಪಕ್ಷ ಆರೋಪ ಮಾಡಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ‘ಬಿಟ್ ಕಾಯಿನ್ ಅಕ್ರಮದ ಬಗ್ಗೆ ಆರೋಪಗಳನ್ನು ಕಾಂಗ್ರೆಸ್ ನಾಯಕರು ಮಾಡಿರುತ್ತಾರೆ. ಜೊತೆಗೆ ‘ವಿಧಾನ ಮಂಡಲದಲ್ಲಿ ಕಾಗದರಹಿತ ಯೋಜನೆ’ಯಲ್ಲಿ ಸುಮಾರು 250 ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಅವರು ಆರೋಪಿಸಿರುತ್ತಾರೆ. ಮತದಾರರ ಪಟ್ಟಿಗೆ ಕನ್ನ ಹಾಕಲಾಗಿದೆ ಎಂದೂ ಆರೋಪಿಸಿದ್ದ ಕಾಂಗ್ರೆಸ್ ಮುಖಂಡರು ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಗಳಿಗೆ ದೂರು ನೀಡಿದ್ದರು. ಇದೆಲ್ಲದರ ನಡುವೆ, KRIDL ನಿಗಮದ ಅಕ್ರಮಗಳ ಬಗ್ಗೆ ಸಿಎಜಿ ಕೂಡಾ ವರದಿ ಮಾಡಿದೆ ಎಂದು ಈ ಹಿಂದಿನ ಸರ್ಕಾರದ ಕರ್ಮಕಾಂಡಗಳ ಬಗ್ಗೆ ಕೆ.ಎ.ಪಾಲ್ ಅವರು ಸಿಎಂ ಸಿದ್ದರಾಮಯ್ಯರ ಗಮನಸೆಳೆದಿದ್ದಾರೆ.
ತಾವು ವಿರೋಧ ಪಕ್ಷದಲ್ಲಿದ್ದಾಗ ಹಿಂದಿನ ಸರ್ಕಾರದ ಅವಧಿಯಲ್ಲಿನ ಭ್ರಷ್ಟಾಚಾರ ಆರೋಪಗಳ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತಾ, ಸರಣಿ ಹೋರಾಟ ನಡೆಸುತ್ತಾ, ಸಕ್ಷಮ ಪ್ರಾಧಿಕಾರಗಳಿಗೆ ದೂರುಗಳನ್ನು ನೀಡಿರುತ್ತೀರಿ. ಆದರೆ ಸಮರ್ಪಕ ತನಿಖೆಯಾಗಿಲ್ಲ. ಇದೀಗ ತಾವೇ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವಿರಿ. ಹಾಗಾಗಿ ಚುನಾವಣಾ ಪೂರ್ವದಲ್ಲಿ ಮಾಡಿರುವ ಆರೋಪಗಳ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕೆಂದು ಕೆ.ಎ.ಪಾಲ್ ಮನವಿ ಮಾಡಿದ್ದಾರೆ.
‘ಜಿಂದಾಲ್’ ಹಗರಣ ಕುರಿತು ‘ಸಿಟಿಜನ್ ರೈಟ್ಸ್’ ಮುಖ್ಯಸ್ಥ ಕೆ.ಎ.ಪಾಲ್ ನಡೆಸಿದ್ದ ಕಾನೂನು ಹೋರಾಟವು ಸಿಎಂ ಬಿಎಸ್‌ವೈ ಪದಚ್ಯುತಿಗೆ ಕಾರಣವಾಗಿತ್ತು. ‘ಬಿಟ್ ಕಾಯಿನ್ ಅಕ್ರಮ’ ಕುರಿತ ಸಿಟಿಜನ್ ಹೋರಾಟದಿಂದ ಕೇಂದ್ರ ಸರ್ಕಾರವೇ ಮುಜುಗರಪಟ್ಟುಕೊಂಡಿತು. ಈ ಹಗರಣದ ಪ್ರತಿಧ್ವನಿಯಿಂದಾಗಿ ಆಗಿನ ಸಿಎಂ ಬೊಮ್ಮಾಯಿ ತಲೆದಂಡದ ಆಂತಕ ಕವಿದಿತ್ತು. ಪಿಎಸ್‌ಐ ಕರ್ಮಕಾಂಡ, ಮತದಾರರ ಪಟ್ಟಿಯಲ್ಲಿನ ಅಕ್ರಮ ಕುರಿತ ‘ಸಿಟಿಜನ್’ ಕಾನೂನು ಸಮರವು ಸಚಿವರಾಗಿದ್ದ ಅಶ್ವತ್ಥನಾರಾಯಣ ತಲೆದಂಡದ ಹಂತಕ್ಕೆ ಕೊಂಡೊಯ್ದಿತ್ತು. ಆದರೆ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳೇ ಇದ್ದುದರಿಂದಾಗಿ ಈ ನಾಯಕರು ಪದಚ್ಯುತಿಯಿಂದ ಪಾರಾಗಿದ್ದರು.