ಗಡಿನಾಡಿನ ಅಭಿವೃದ್ಧಿಗೆ 100 ಕೋಟಿ ರೂ. 3 ಕೋಟಿ ವೆಚ್ಚದಲ್ಲಿ ಹಾವೇರಿಯಲ್ಲಿ ಕಸಾಪ ಭವನ- -ಮುಖ್ಯಮಂತ್ರಿ ಬೊಮ್ಮಾಯಿ

ಹಾವೇರಿ :ಜ.8- ಗಡಿನಾಡಿನ ಶಿಕ್ಷಣ, ಆರೋಗ್ಯ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ 100 ಕೋಟಿ ರೂ.ಒದಗಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕನ್ನಡದ ಶಾಸ್ತ್ರೀಯ ಭಾಷೆ ಸ್ಥಾನಮಾನದ ಸಂಶೋಧನಾ ಕಾರ್ಯಗಳಿಗೆ ಉನ್ನತ ಮಟ್ಟದಲ್ಲಿ ಸಾಹಿತಿಗಳ ಸಮಿತಿ ರಚಿಸಲಾಗುವುದು. ಸಮಿತಿ ಸೂಚಿಸುವ ಸಂಶೋಧನಾ ಕಾರ್ಯಗಳಿಗೆ ಬೇಕಾದ ಹಣವನ್ನು ಸರ್ಕಾರ ಒದಗಿಸಲಿದೆ. ಸಮ್ಮೇಳನದ ನೆನಪಿಗೆ ಹಾವೇರಿಯಲ್ಲಿ 3 ಕೋಟಿ ರೂ.ವೆಚ್ಚದಲ್ಲಿ ಕಸಾಪ ಭವನ ನಿರ್ಮಿಸಿ, ಕರ್ನಾಟಕ ಜಾನಪದ ವಿವಿ ಸಹಯೋಗದಲ್ಲಿ ಗುಣಮಟ್ಟದ ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗಡಿನಾಡಿನ ಶಿಕ್ಷಣ, ಆರೋಗ್ಯ ಮತ್ತು ಸೌಕರ್ಯಗಳ ಅಭಿವೃದ್ಧಿಗೆ ಈಗಾಗಲೆ 25 ಕೋಟಿ ರೂ. ಅನುದಾನ ಒದಗಿಸಿದ್ದು, ಈ ವರ್ಷ ಇನ್ನೂ 100 ಕೋಟಿ ರೂ. ಅನುದಾನ ಒದಗಿಸಲಾಗುವುದು. ಕನ್ನಡಕ್ಕಾಗಿ ಹೋರಾಡಿದ ಹೋರಾಟಗಾರರ ಮೇಲಿರುವ ಕಾಗ್ನಿಜಬಲ್ ಹೊರತುಪಡಿಸಿದ ಉಳಿದ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾನೂನಿನಲ್ಲಿ ಇರುವಂತಹ ಅವಕಾಶಗಳನ್ನು ಪರಿಶೀಲಿಸಿ, ಕೇಸ್‍ಗಳನ್ನು ಹಿಂದೆ ಪಡೆಯಲು ಸರ್ಕಾರ ಬದ್ಧವಾಗಿದೆ .
2008 ರಿಂದ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಲಭಿಸಿದೆ. ಇಲ್ಲಿಯವರೆಗೆ ಕೇಂದ್ರ ಸರ್ಕಾರದಿಂದ 13.30 ಕೋಟಿ ರೂ. ನೆರವು ದೊರೆತಿದೆ. ಮೈಸೂರು ವಿವಿಯ ದೊಡ್ಡ ಕಟ್ಟಡವೊಂದನ್ನು ಈಗಾಗಲೇ ಅಧ್ಯಯನ ಕೇಂದ್ರಕ್ಕೆ ನೀಡಲಾಗಿದೆ. ಶಾಸ್ತ್ರೀಯ ಭಾಷೆ ಕುರಿತ ಸಂಶೋಧನೆ, ಗ್ರಂಥಾಲಯ, ಚರ್ಚೆಗಳಿಗೆ ಮಾರ್ಗದರ್ಶನ ಮಾಡಲು ಸಮ್ಮೇಳನಾಧ್ಯಕ್ಷರ ಮಾರ್ಗದರ್ಶನದಲ್ಲಿ ನಾಡಿನ ಹಿರಿಯ ಸಾಹಿತಿಗಳ ಸಮಿತಿ ರಚಿಸಲಾಗುವುದು. ಸಮಿತಿ ಸೂಚಿಸುವ ಕಾರ್ಯಗಳಿಗೆ ಎಷ್ಟು ಅನುದಾನ ಬೇಕಾದರೂ ಸರ್ಕಾರ ಒದಗಿಸಲಿದೆ. ಹಾವೇರಿ ಜಿಲ್ಲಾ ಕಸಾಪ ಭವನ ನಿರ್ಮಾಣಕ್ಕೆ 3 ಕೋಟಿ ರೂ.ಒದಗಿಸಲಾಗುವುದು. ಕರ್ನಾಟಕ ಜಾನಪದ ವಿವಿ ಸಹಯೋಗದಲ್ಲಿ ಅಲ್ಲೊಂದು ಗುಣಮಟ್ಟದ ಸಂಶೋಧನಾ ಕೇಂದ್ರವನ್ನು ಕಸಾಪ ರೂಪಿಸಬೇಕು ಎಂದರು.
ರಾಜ್ಯದಲ್ಲಿ ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದವರಿಗೆ ಪಿಂಚಣಿ ನೀಡುವ ರೀತಿ, ಗಡಿಯಾಚೆ ಹೋರಾಡಿದ ಕನ್ನಡಿಗರಿಗೂ ಪಿಂಚಣಿ ನೀಡುವ ಕಾರ್ಯವನ್ನು ಸರ್ಕಾರ ಪ್ರಾರಂಭಿಸಲಿದೆ ಎಂದು ಹೇಳಿದರು.
ಕಾನೂನು ತೊಡಕು ನಿವಾರಿಸಿಕೊಂಡು ಮಹದಾಯಿ ಯೋಜನೆ, ಕಳಸಾ ಬಂಡೂರಿ ಯೋಜನೆಯಾಗಿ ಅನುಷ್ಠಾನವಾಗಲಿದೆ. ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರಿಗೆ ಹೆಚ್ಚಿಸಲು ಶೀಘ್ರ ನ್ಯಾಯಮಂಡಳಿಯ ಅನುಮೋದನೆ ಸಿಗುವ ಭರವಸೆ ಇದೆ. ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಮಧ್ಯ ಕರ್ನಾಟಕದ ಲಕ್ಷಾಂತರ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಕರ್ನಾಟಕಕ್ಕೆ ಹೊರ ರಾಜ್ಯದ ಜನ ದೊಡ್ಡ ಪ್ರಮಾಣದಲ್ಲಿ ಬರುತ್ತಿದ್ದಾರೆ ಆದರೆ ಕನ್ನಡ ಕಲಿಯುತ್ತಿಲ್ಲ, ಈ ನಾಡಿನಲ್ಲಿ ನೆಲೆಸಲು ಇಚ್ಛಿಸುವವರು ಕಡ್ಡಾಯವಾಗಿ ಕನ್ನಡ ಕಲಿಯಲೇಬೇಕೆಂಬ ನೀತಿ ಜಾರಿಗೊಳಿಸಲು ಚಿಂತನೆ ನಡೆದಿದೆ. ವಲಸೆ ಬಂದು ಇಲ್ಲಿ ನೆಲೆಸುವವರಿಗೆ ಕನ್ನಡ ಕಲಿಸಲು ವಿಶೇಷ ಕೋರ್ಸ್ ರೂಪಿಸಿ, ಜಾರಿಗೊಳಿಸುವ ಕಾರ್ಯಕ್ಕೆ ಆದಷ್ಟು ಬೇಗ ಕಾಯಕಲ್ಪ ನೀಡುತ್ತೇವೆ. ಕನ್ನಡಕ್ಕಾಗಿ ಗಡಿಯಾಚೆ ಹೋರಾಡಿದ ಕನ್ನಡಿಗರಿಗೆ ಪಿಂಚಣಿ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.

Leave a Reply

Your email address will not be published. Required fields are marked *

error: Content is protected !!