ಆದಿಚುಂಚನಗಿರಿ ಜಾತ್ರಾ ಮಹೋತ್ಸವ ಪ್ರಯುಕ್ತ ರಾಮನಗರ ಬಸ್ ನಿಲ್ದಾಣದಲ್ಲಿ 10 ನೇ ವರ್ಷದ ಅರವಂಟಿಗೆ ಯಶಸ್ವಿ

ರಾಮನಗರ: ಮನುಷ್ಯರು ತಮ್ಮ ಒತ್ತಡದ ಜೀವನದ ನಡುವೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರಬೇಕು ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಹೇಳಿದರು.

ರಾಮನಗರ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ರೋಟರಿ ಬಿಜಿಎಸ್ ಕಾಂಗರೂ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮನುಷ್ಯನಲ್ಲಿ ಆರೋಗ್ಯದಲ್ಲಿ ಯಾವಾಗ ಬೇಕಾದರೂ ಏರುಪೇರು ಆಗಬಹುದು, ಒತ್ತಡದ ಜೀವನ, ಜಂಕ್ ಪುಡ್ ಸೇವನೆ, ನಿಗಧಿತ ವ್ಯಾಯಾಮ ಇಲ್ಲದ ಕಾರಣ ರಕ್ತದೊತ್ತಡ, ಸಕ್ಕರೆ ಕಾಯಿಲೆಯಂತಹ ಅನೇಕ ಕಾಯಿಲೆಗಳಿಂದ ಮನುಷ್ಯ ಬಳುತ್ತಿದ್ದಾನೆ, ಈ ನಿಟ್ಟಿನಲ್ಲಿ ಪ್ರತಿ ತಿಂಗಳಿಗೊಮ್ಮೆಯಾದರೂ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಎಂದು ಕರೆ ನೀಡಿದರು.

ಆದಿಚುಂಚನಗಿರಿ ಜಾತ್ರಾ ಮಹೋತ್ಸವದ ಪ್ರಯುಕ್ತ, ಬಿಜಿಎಸ್ ಭಕ್ತವೃಂದ ಮತ್ತು ಕೆ.ಎಸ್.ಆರ್.ಟಿ.ಸಿ. ನೌಕರರು ಕಳೆದ 9 ವರ್ಷಗಳಿಂದ ಅರವಂಟಿಗೆ ನಡೆಸಿಕೊಂಡು ಜಾತ್ರೆಗೆ ತೆರಳುವ ಭಕ್ತರಿಗೆ ಅನ್ನದಾನ, ಬಸ್ ವ್ಯವಸ್ಥೆ ಮಾಡುತ್ತಿರುವುದು ಶ್ಲಾಘನೀಯ, 10 ನೇ ವರ್ಷದ ಅರವಂಟಿಗೆಯ ನೆನಪಿಗೆ ಕಾಂಗರೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದಾರೆ ಭಕ್ತರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.

ಬಿಜಿಎಸ್ ಭಕ್ತವೃಂದದ ಸಿದ್ದಲಿಂಗೇಗೌಡ (ಮಧು) ಮಾತನಾಡಿ 10 ನೇ ವರ್ಷದ ಅರವಂಟಿಗೆಯನ್ನು ಅದ್ದೂರಿಯಾಗಿ ಮಾಡಬೇಕೆಂಬ ಆಸೆಗೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಅಡ್ಡಿಯಾಯಿತು. ಕೇವಲ 4 ದಿನಗಳಲ್ಲಿ ಭಕ್ತರ ಮತ್ತು ದಾನಿಗಳ ಸಹಕಾರದಲ್ಲಿ ಕಾರ್ಯಕ್ರಮ ಆಯೋಜಿಸಿ, 8000 ಮಂದಿಗೆ ಅನ್ನದಾನ ಮತ್ತು 1600 ಮಂದಿಗೆ ಆರೋಗ್ಯ ತಪಾಸಣೆಯನ್ನು ಕಾಂಗರೂ ಆಸ್ಪತ್ರೆಯ ಸಿಬ್ಬಂದಿ ಮಾಡಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ಜನರ ಮನಸ್ಸಿನಲ್ಲಿ ಉಳಿಯುವಂತ ಕಾರ್ಯಕ್ರಮ ರೂಪಿಸಲು ಸಹಕಾರ ನೀಡಿದ ದಾನಿಗಳಿಗೆ, ಕಾಂಗರೂ ಆಸ್ಪತ್ರೆಯ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಅರವಂಟಿಗೆಯಲ್ಲಿ ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್, ಘಟಕ ವ್ಯವಸ್ಥಾಪಕರಾದ ರಾಘವೇಂದ್ರ, ಪ್ರದೀಪ್, ಸಂಚಾರ ನಿಯಂತ್ರಕರು, ಸಾರಿಗೆ ಸಿಬ್ಬಂದಿ, ಬಿಜಿಎಸ್ ಭಕ್ತವೃಂದದ ಪದಾಧಿಕಾರಿಗಳು, ಒಕ್ಕಲಿಗ ಸರ್ಕಾರಿ ನೌಕರರ ಸಂಘ ಮತ್ತು ನೇಗಿಲಯೋಗಿ ಟ್ರಸ್ಟ್ ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!