ಲಖನೌ: ಉತ್ತರ ಪ್ರದೇಶದಲ್ಲಿ ಮುುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೊದಲ ಬಾರಿ ಅಧಿಕಾರ ವಹಿಸಿಕೊಂಡ 2017ರಿಂದ ಈವರೆಗಿನ 6 ವರ್ಷದಲ್ಲಿ ಒಟ್ಟು 183 ಕ್ರಿಮಿನಲ್‌ಗಳನ್ನು ಎನ್‌ಕೌಂಟರ್ ಮಾಡಲಾಗಿದೆ.
ಒಟ್ಟು 10,900 ಎನ್‌ಕೌಂಟರ್‌ಗಳಲ್ಲಿ 23,300 ಕ್ರಿಮಿನಲ್‌ಗಳನ್ನು ಬಂಧಿಸಲಾಗಿದೆ. ಈ ಘಟನೆಗಳಲ್ಲಿ 5,046 ಕ್ರಿಮಿನಲ್‌ಗಳು ಗಾಯಗೊಂಡಿದ್ದಾರೆ. 1,443 ಪೊಲೀಸರು ಕೂಡ ಗಾಯಗೊಂಡಿದ್ದು, 13 ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ.
ಇತ್ತ ಉತ್ತರ ಪ್ರದೇಶದಲ್ಲಿ ಗ್ಯಾಂಗ್‌ಸ್ಟರ್‌ಗಳ ಎನ್‌ಕೌಂಟರ್ ಸರಣಿ ಮುಂದುವರಿದಿದ್ದು, ರಾಜ್ಯ ಪೊಲೀಸರ ವಿಶೇಷ ಕಾರ್ಯಪಡೆ ಗುರುವಾರ ಅನಿಲ್ ದುಜಾನಾ ಎಂಬ ಮತ್ತೊಬ್ಬ ಪಾತಕಿಯನ್ನು ಮೀರತ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದೆ. ದೆಹಲಿ, ರಾಷ್ಟ್ರ ರಾಜಧಾನಿ ಪ್ರದೇಶದ ನೋಯ್ಡಾ, ಗಾಜಿಯಾಬಾದ್ ಮತ್ತು ಇತರ ಪ್ರದೇಶಗಳಲ್ಲಿ ಅನಿಲ್ ದುಜಾನಾ, ಜನರನ್ನು ಭಯಭೀತರನ್ನಾಗಿಸಲು ಕುಖ್ಯಾತನಾಗಿದ್ದ. 16 ಹತ್ಯೆ, ಸುಲಿಗೆ ಸೇರಿ 60ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದ.
ಇತ್ತೀಚೆಗೆ ಎಸ್‌ಪಿ ಮುಖಂಡ ಹಾಗೂ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್‌ನ ಪುತ್ರ ಹಾಗೂ ಆತನ ಸಹಚರನನ್ನು ಪೊಲೀಸರು ಝಾನ್ಸಿ ಬಳಿ ಎನ್‌ಕೌಂಟರ್‌ನಲ್ಲಿ ಸಾಯಿಸಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಅತೀಕ್ ಅಹ್ಮದ್ ಹಾಗೂ ಆತನ ಸೋದರರನ್ನು ಕೆಲವು ಕ್ರಿಮಿನಲ್‌ಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದಕ್ಕೂ ಮುನ್ನ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ ಪಾತಕಿಗಳನ್ನು ಹೊಸಕಿ ಹಾಕುವ ಗುಡುಗು ಹಾಕಿದ್ದರು. 2017ರಲ್ಲಿ ಯೋಗಿ ಅಧಿಕಾರಕ್ಕೆ ಬಂದ ನಂತರ ಈವರೆಗೆ 183 ಕ್ರಿಮಿನಲ್‌ಗಳ ಎನ್‌ಕೌಂಟರ್ ನಡೆದಿದೆ.
