ದಾವಣಗರೆ ಜಿಲ್ಲೆಯಲ್ಲಿನ ಲೋಕ ಅದಾಲತ್‌ನಲ್ಲಿ 19.17 ಕೋಟಿ ರೂ. ಪರಿಹಾರ

ಲೋಕ ಅದಾಲತ್
ದಾವಣಗೆರೆ : ಫೆ. 11- ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ಬೃಹತ್ ಲೋಕ ಅದಾಲತ್‌ನಲ್ಲಿ ಒಟ್ಟು 1,24,248 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದು, 19.17 ಕೋಟಿ ರೂ. ಪರಿಹಾರ ಕೊಡಿಸಲಾಯಿತು.
662 ಚೆಕ್ ಅಮಾನ್ಯ ಪ್ರಕರಣಗಳ ಪೈಕಿ 180 ಪ್ರಕರಣ ಇತ್ಯರ್ಥ ಪಡಿಸಿ 4.95 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ. ಬ್ಯಾಂಕ್‌ಗೆ ಸಂಬಂಧಿಸಿದ 116 ಪ್ರಕರಣಗಳ ಪೈಕಿ 21ನ್ನು ಇತ್ಯರ್ಥ ಪಡಿಸಿ 89.22 ಲಕ್ಷ ರೂ. ಪರಿಹಾರ ಕಲ್ಪಿಸಲಾಯಿತು.
ಕೈಗೆತ್ತಿಕೊಂಡಿದ್ದ ಹಣ ವಾಪಸಾತಿಗೆ ಸಂಬಂಧಿಸಿದ 250 ಪ್ರಕರಣಗಳಲ್ಲಿ 22ನ್ನು ಇತ್ಯರ್ಥಪಡಿಸಿ 62.47 ಲಕ್ಷ ಪರಿಹಾರ ನೀಡಲು ತಿಳಿಸಲಾಯಿತು.
ವಿದ್ಯುತ್ ಕಾಯ್ದೆಗೆ ಸಂಬಂಧಿಸಿದ 219 ಪ್ರಕರಣಗಳನ್ನು ಇತ್ಯರ್ಥ ಪಡಿಸಿ 37.97 ಲಕ್ಷ ರೂ. ಪರಿಹಾರ ಕೊಡಿಸಲಾಗಿದೆ.
ಕೈಗೆತ್ತಿಕೊಂಡ 123965 ವ್ಯಾಜ್ಯ ಪೂರ್ವ ಪ್ರಕರಣಗಳ ಪೈಕಿ 121355 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 3.48 ಕೋಟಿ ರೂ. ಪರಿಹಾರ ಕೊಡಿಸಲಾಯಿತು.
ಕಾರ್ಮಿಕರ ಸಮಸ್ಯೆ, ಪಾಲುದಾರಿಕೆ ಸಮಸ್ಯೆ, ಸಿವಿಲ್ ವ್ಯಾಜ್ಯಗಳು, ಸಾರ್ವಜನಿಕ ಸೊತ್ತುಗಳಿಗೆ ಹಾನಿ ಹೀಗೆ ನಾನಾ ತರಹದ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ನೇತೃತ್ವದಲ್ಲಿ ಬೃಹತ್ ಲೋಕ ಅದಾಲತ್ ನಡೆಯಿತು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್ ಸಹಿತ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು ಇದ್ದರು.