ಬಾಗಲಕೋಟೆಯಲ್ಲಿ 2.10 ಕೋಟಿ ರೂ. ನಗದು ವಶ

ಬಾಗಲಕೋಟೆಯಲ್ಲಿ 2.10 ಕೋಟಿ ರೂ. ನಗದು ವಶ

ಬಾಗಲಕೋಟೆ : ಜಿಲ್ಲೆಯ ಜಮಖಂಡಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಸ್ಥಾಪಿಸಲಾದ ಹುನ್ನೂರ ಚೆಕ್‍ಪೋಸ್ಟ್ ನಲ್ಲಿ ಸಂಶಯಾಸ್ಪದವಾದ ಹಾಗೂ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಟ್ಟು 2.10 ಕೋಟಿ ರೂ.ಗಳ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಜಮಖಂಡಿಯ ಹುನ್ನೂರು ಚೆಕ್ ಪೋಸ್ಟನಲ್ಲಿ ಕಾರ್ಯನಿರತ ಸ್ಟಾಟಿಸ್ಟಿಕಲ್ ಸರ್ವೆನೆಸ್ಟ್ ತಂಡದ ಸದಸ್ಯರು ತಪಾಸಣೆ ನಡೆಸುತ್ತಿರುವ ವೇಳೆಯಲ್ಲಿ ಅನುಮಾನಾಸ್ಪದ ಒಂದು ವಾಹನವನ್ನು ತಡೆದು ನಿಲ್ಲಿಸಿ ತಪಾಸನೆಗೆ ಒಳಪಡಿಸಿದಾಗ ದಾಖಲೆ ಇಲ್ಲದ ಅಂದಾಜು 2.10 ಕೋಟಿ ರೂ.ಗಳ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಸುನೀಲ್‍ಕುಮಾರ ಮಾಹಿತಿ ನೀಡಿದ್ದಾರೆ.
ಚೆಕ್ ಪೋಸ್ಟ್‌ ನಲ್ಲಿ ದೊರೆತಿರುವ ಹಣದ ಮಾಲಿಕರು ಒಂದು ಸೌಹಾರ್ದ ಕ್ರೆಡಿಟ್ ಸಹಕಾರಿ ಲಿಮಿಟೆಡ್‍ಗೆ ಸಂಬಂಧಿಸಿದವರಾಗಿದ್ದು, ಅವರು ಹಿಪ್ಪರಗಿ ಸತ್ತಿ ಅಥಣಿ ಬನಹಟ್ಟಿ ರಬಕವಿ ಬೇರೆ ಬೇರೆ ಶಾಖೆಗಳಿಗೆ ಹಣ ರವಾನಿಸುತಿರುವುದಾಗಿ ಮೌಖಿಕವಾಗಿ ಮಾಹಿತಿ ನೀಡಿರುತ್ತಾರೆ.
ಇವರು ನೀಡಿರುವ ದಾಖಲಾತಿಗಳು ಪರಿಪೂರ್ಣ ವೆಂದು ಪರಿಗಣಿಸಲು ಸಾಧ್ಯವಾಗದೆ ಇದ್ದ ಹಿನ್ನೆಲೆಯಲ್ಲಿ ಅವರಿಗೆ ದಾಖಲೆ ಒದಗಿಸಲು ಹೆಚ್ಚಿನ ಅವಕಾಶವನ್ನು ನೀಡಿ, ಸದರಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡು ಚುನಾವಣಾಧಿಕಾರಿಗಳ ಕಚೇರಿಯಿಂದ ಜಮಖಂಡಿಯ ಸರ್ಕಾರಿ ಖಜಾನೆಗೆ ಜಮಾ ಮಾಡಲಾಗಿದೆ. ಪಂಚನಾಮೆ ಸಹಿತ ಜಿಲ್ಲಾಮಟ್ಟದ ಹಣ ಮುಟ್ಟುಗೋಲು ಪರಿಹಾರ ಸಮಿತಿಗೆ ವರದಿ ಸಲ್ಲಿಸಲಾಗಿದ್ದು, ಸದರಿ ಸಮಿತಿಯು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ.
ಬಾಗಲಕೋಟೆಯಲ್ಲಿ ಇನ್ನೊಂದು ಕಡೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.40 ಲಕ್ಷ ಹಣ ಜಪ್ತಿ ಮಾಡಲಾಗಿದೆ. ಬೈಕ್ ನಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ಹಣ ಪತ್ತೆಯಾಗಿದ್ದು, ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣ ಚೆಕ್ ಪೋಸ್ಟ್ ಬಳಿ ಈ ಘಟನೆ ನಡೆದಿದೆ. ಬಾರ್ ಗೆ ಸೇರಿದ್ದ ಹಣ ಬ್ಯಾಂಕ್ ಗೆ ಕೊಂಡೊಯ್ಯುತ್ತಿದ್ದೆ ಎಂದು ವ್ಯಕ್ತಿ ಮಾಹಿತಿ ನೀಡಿದ್ದಾನೆ. ಸೂಕ್ತ ದಾಖಲೆ ಇಲ್ಲದೆ ಅಧಿಕಾರಿಗಳು ಹಣ ವಶಕ್ಕೆ ಪಡೆದಿದ್ದಾರೆ. ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಮತಕ್ಷೇತ್ರದಲ್ಲಿ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!