ದಾಯಾದಿಗಳ ಕಲಹಕ್ಕೆ 20 ವರ್ಷದ ಅಡಿಕೆ ತೋಟ ನಾಶವಾಯ್ತು!
ದಾವಣಗೆರೆ : ದಾಯಾದಿಗಳ ಕಲಹಕ್ಕೆ 20 ವರ್ಷ ಕಟ್ಟಪಟ್ಟು ಬೆವರು ಸುರಿಸಿ ಕಾಪಾಡಿಕೊಂಡು ಬಂದಿದ್ದ ಅಡಿಕೆ ತೋಟ ಕೆಲವೇ ಗಂಟೆಗಳಲ್ಲಿ ನಾಶ ಮಾಡಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ನಡೆದಿದೆ. ವೆಂಕಟೇಶ್ ಎಂಬುವರಿಗೆ ಸೇರಿದ 15 ಗುಂಟೆಯಲ್ಲಿದ್ದ 20 ವರ್ಷದ ಅಡಿಕೆ ಮರಗಳನ್ನು ರಾತ್ರೋರಾತ್ರಿ ಜೆಸಿಬಿ ಮೂಲಕ ನಾಶ ಮಾಡಿ ನೆಲಸಮಗೊಳಿಸಿದ್ದಾರೆ.
ರೈತರಾದ ವೆಂಕಟೇಶಪ್ಪ, ವೀರೇಶಪ್ಪ ಹಾಗೂ ಹನುಮಂತಪ್ಪ ಮೂವರು ಸಹೋದರರು. ಈ ಮೂವರು ಸಹೋದರರ ಪೈಕಿ ವೆಂಕಟೇಶ್ ಅವರ ಪಾಲಿನ ಅಡಿಕೆ ಮರಗಳು ಸಮೃದ್ಧವಾಗಿ ಬೆಳೆದಿದ್ದವು. ಇದರಿಂದ ತೋಟ ಬಿಟ್ಟುಕೊಡುವಂತೆ ಸಹೋದರರಾದ ವೀರೇಶ್ ಹಾಗೂ ಹನುಮಂತಪ್ಪ ಇಬ್ಬರು ವೆಂಕಟೇಶ್‌ಗೆ ಒತ್ತಾಯಿಸಿದ್ದರು. ತೋಟ ಬಿಟ್ಟುಕೊಡಲು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಅಡಿಕೆ ಮರಗಳನ್ನು ನಾಶ ಮಾಡಿದ್ದಾರೆ ಎನ್ನಲಾಗುತ್ತಿದೆ.
ಮಕ್ಕಳಂತೆ ಬೆಳೆಸಿದ್ದ ಅಡಿಕೆ ಮರಗಳು ನೆಲಕಚ್ಚಿದ್ದರಿಂದ ವೆಂಕಟೇಶ್‌ಗೆ ದಿಕ್ಕು ತೋಚದಂತಾಗಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬ0ಧ ವೆಂಕಟೇಶ್ ತನ್ನ ಸಹೋದರಿಬ್ಬರ ವಿರುದ್ಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿರುವ ಚನ್ನಗಿರಿ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಲು ಬಲೆ ಬೀಸಿದ್ದು, ಇಬ್ಬರು ತಲೆ ಮರೆಸಿಕೊಂಡಿದ್ದಾರೆ.