ಬೆದರಿಗೆ ಪತ್ರ ಬರೆದವರಿಗೆ ತಕ್ಕ ಉತ್ತರ ನೀಡುವೆ: ಸುದೀಪ್
ಬೆಂಗಳೂರು: ನನಗೆ ಬೆದರಿಕೆ ಪತ್ರ ಕಳುಹಿಸಿರುವವರು ಚಿತ್ರರಂಗದವರೇ ಆಗಿದ್ದು, ಅವರಿಗೆ ತಕ್ಕ ಉತ್ತರ ಕೊಡುವುದಾಗಿ ನಟ ಕಿಚ್ಚ ಸುದೀಪ್ ಹೇಳಿದ್ದಾರೆ.
ಬೆಂಗಳೂರು ವಿಮಾನನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸುದೀಪ್, ನನಗೆ ಬೆದರಿಕೆ ಪತ್ರ ಬಂದಿರುವುದು ನಿಜ ಮತ್ತು ಅದನ್ನು ಕಳುಹಿಸಿರುವುದೂ ಯಾರೆಂದು ಗೊತ್ತಿದೆ. ಚಿತ್ರರಂಗದವರೇ ಒಬ್ಬರು ಅದನ್ನು ಕಳುಹಿಸಿದ್ದಾರೆ. ಅವರಿಗೆ ತಕ್ಕ ಉತ್ತರ ನೀಡುವೆ ಎಂದು ಸುದೀಪ್ ಹೇಳಿದ್ದಾರೆ.
ಅವರಿಗೆ ನನ್ನ ಬಗ್ಗೆ ಗೊತ್ತಿದೆ. ಮನೆಯ ವಿಳಾಸ ತಿಳಿದಿದೆ. ಅವರು ಪೋಸ್ಟ್ ಮೂಲಕ ಬೆದರಿಕೆ ಪತ್ರ ಕಳುಹಿಸಿದ್ದು ಏಕೆ? ಎಂಬ ಕುರಿತಾದ ಎಲ್ಲವನ್ನು ಬಹಿರಂಗಪಡಿಸುತ್ತೇನೆ. ಬೆದರಿಕೆ ಪತ್ರಕ್ಕೆ ಉತ್ತರ ಕೊಡುತ್ತೇನೆ ಎಂದೂ ತಿಳಿಸಿದ್ದಾರೆ.
ಕಿಚ್ಚ ಸುದೀಪ್ ಅವರಿಗೆ ಬೆದರಿಕೆ ಪತ್ರ ಬಂದಿರುವ ಬಗ್ಗೆ ಅವರ ಮ್ಯಾನೇಜರ್ ಜ್ಯಾಕ್ ಮಂಜು, ಪೊಲೀಸರಿಗೆ ದೂರು ನೀಡಿದ್ದಾರೆ. ಮಾರ್ಚ್ 29ರಂದೇ ಸುದೀಪ್ ಅವರ ಮನೆಗೆ ಈ ಪತ್ರಗಳು ತಲುಪಿವೆ ಎನ್ನಲಾಗಿದೆ.
ಪತ್ರದಲ್ಲಿ ಸುದೀಪ್ ಹಾಗೂ ಅವರ ಪೋಷಕರನ್ನು ನಿಂದಿಸಲಾಗಿದೆ. ಜತೆಗೆ ವಿಡಿಯೊ ಬಹಿರಂಗ ಪಡಿಸುತ್ತೇವೆ ಎಂದು ಬೆದರಿಕೆ ಹಾಕಲಾಗಿದೆ. ಆರೋಪಿಗಳ ಪತ್ತೆಗೆ ಮುಂದಾಗಿದ್ದೇವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.