ಶಾರ್ಟ್ ಸಕ್ಯೂರ್ಟ್ನಿಂದ ಕಾರಿಗೆ ಬೆಂಕಿ, ಡೋರ್ ತೆಗೆಯಲಾಗದೆ ಜೀವಂತ ಸುಟ್ಟುಹೋದ ಯುವಕ

ಬೆಂಗಳೂರು: ಚಲಿಸುತ್ತಿದ್ದ ಕಾರು ಶಾರ್ಟ್ ಸಕ್ಯೂರ್ಟ್ನಿಂದ ಬೆಂಕಿ ಹತ್ತಿಕೊಂಡ ಪರಿಣಾಮ ಕಾಲ್ ಸೆಂಟರ್ ಉದ್ಯೋಗಿಯೊಬ್ಬ ಸಜೀವ ದಹನವಾಗಿರುವ ಭೀಕರ ಘಟನೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ನಡೆದಿದೆ. ಉತ್ತರಹಳ್ಳಿಯ ನಿವಾಸಿ ದರ್ಶನ್ (35) ಎಂಬಾತ ನೈಸ್ ರಸ್ತೆಯ ಚನ್ನಸಂದ್ರ ಸೇತುವೆ ಬಳಿ ಹೋಗುತ್ತಿರುವಾಗ ಈ ಘಟನೆ ನಡೆದಿದೆ. ಕಾರ್‌ಡೋರ್ ತಗೆಯಲು ಎಷ್ಟೇ ಪ್ರಯತ್ನಿಸಿದರು ಡೋರ್ ಒಪನ್ ಆಗದೆ ಜೀವಂತವಾಗಿ ಸುಟ್ಟು ಹೋಗಿದ್ದಾರೆ. ದರ್ಶನ್ ತ್ಯಾಗರಾಜನಗರದ ಕಾಲ್ ಸೆಂಟರ್ ಕಂಪನಿಯಲ್ಲಿ (ಬಿಪಿಒ) ಸಾಫ್ಟ್ವೇರ್ ಸಿಸ್ಟಮ್ ಆಪರೇಟಿಂಗ್ ಕೆಲಸ ಮಾಡುತ್ತಿದ್ದರು. ಶನಿವಾರ ರಾತ್ರಿ ತುಮಕೂರು ರಸ್ತೆಯಲ್ಲಿರುವ ಸಂಬಂಧಿಕರ ಮನೆಯಿಂದ ಸ್ಯಾಂಟ್ರೋ ಕಾರಿನಲ್ಲಿ ಮನೆಗೆ ವಾಪಸಾಗುತ್ತಿದ್ದಾಗ ಮಾರ್ಗಮಧ್ಯೆ ಚಿನ್ನಸಂದ್ರ ಸೇತುವೆ ಬಳಿ ಕಾರಿನ ಎಸಿ ಸಿಸ್ಟಮ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಕಾರನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ ದರ್ಶನ್‌ಗೆ ಕಾರಿನ ಬಾಗಿಲು ತೆಗೆಯಲು ಸಾಧ್ಯವಾಗಲಿಲ್ಲ.

ಅದೇ ರಸ್ತೆಯಲ್ಲಿ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರು ದರ್ಶನ್ ಕಾರಿಗೆ ಸಣ್ಣದಾಗಿ ಬೆಂಕಿ ಹತ್ತಿಕೊಂಡಿರುವುದನ್ನು ಗಮನಿಸಿದ್ದರು. ಸಹಾಯ ಮಾಡುವ ಉದ್ದೇಶದಿಂದ ತಮ್ಮ ಕಾರನ್ನು ನಿಲ್ಲಿಸಿ ದರ್ಶನ್ ಕಾರಿನ ಬಳಿ ಬಂದಿದ್ದರು. ಆ ವೇಳೆ ಕಾರಿನ ಬಾಗಿಲು ತೆಗೆಯಲಾಗದೇ ಹೆಲ್ಪ್-ಹೆಲ್ಪ್ ಎಂದು ದರ್ಶನ್ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಸಹಾಯ ಮಾಡಲು ಬಂದ ವ್ಯಕ್ತಿ ಇನ್ನೇನು ಕಾರಿನ ಬಾಗಿಲು ತೆಗೆಯಬೇಕೆನ್ನುವಷ್ಟರಲ್ಲಿ ಸ್ಟೇರಿಂಗ್ ಬಳಿಯಿದ್ದ ಎಸಿ ಸಿಸ್ಟಮ್ ಸ್ಫೋಟಗೊಂಡು ಬೆಂಕಿಯ ಕೆನ್ನಾಲಿಗೆ ಕಾರಿನ ಮುಂಭಾಗದ ಸೀಟಿಗೆ ವ್ಯಾಪಿಸಿ ದರ್ಶನ್ ಮೈಗೆ ಹತ್ತಿಕೊಂಡಿತ್ತು.ಇದನ್ನು ಕಂಡು ಆತಂಕಗೊಂಡ ವ್ಯಕ್ತಿ, ದರ್ಶನ್ ಅವರ ಕಾರಿನ ಹತ್ತಿರ ಹೋಗದೆ, ನೈಸ್ ಟೋಲ್ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ನೈಸ್ ರಸ್ತೆಯಲ್ಲಿ ಪೆಟ್ರೋಲಿಂಗ್ ಮಾಡುತ್ತಿದ್ದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ಆರಿಸಿದ್ದಾರೆ. ಆದರೆ, ಅಷ್ಟರಲ್ಲಿ ಬೆಂಕಿಯಿಂದ ದರ್ಶನ್ ಸಜೀವ ದಹನವಾಗಿದ್ದರು. ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ದರ್ಶನ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಆರ್‌ಆರ್‌ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಬೆಂಕಿ ಉಂಟಾಗಿದ್ದು ಹೇಗೆ?:
2003ರ ಮಾಡೆಲ್‌ನ ಸ್ಯಾಂಟ್ರೋ ಕಾರು ಇದಾಗಿದ್ದು, ವೇಗವಾಗಿ ಬರುವ ವೇಳೆ ಕಾರಿನ ಇಂಜಿನ್ ಬಿಸಿಯಾಗಿ ಏರ್ ಕಂಡಿಷನ್‌ಗೆ ಸಂಬಂಧಿಸಿದ ವಯರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಎಫ್‌ಎಸ್‌ಎಲ್ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ದರ್ಶನ್ ಅತಿಯಾಗಿ ಸಿಗರೇಟ್ ಸೇದುತ್ತಿದ್ದರು ಎನ್ನಲಾಗಿದೆ. ಸಿಗರೇಟ್ ಸೇದುತ್ತಿದ್ದಾಗ ಕಾರಿನ ಎಸಿ ಆನ್‌ನಲ್ಲಿದ್ದರೆ ಕೆಲವೊಮ್ಮೆ ಬೆಂಕಿ ಉಂಟಾಗುವ ಸಾಧ್ಯತೆಗಳಿರುತ್ತವೆ. ಆದರೆ, ಕಾರಿನ ಇಂಜಿನ್‌ನಲ್ಲಿ ಯಾವುದೇ ಲೋಪ ಕಂಡು ಬಂದಿಲ್ಲ. ಸ್ಟೇರಿಂಗ್ ಪಕ್ಕದಲ್ಲಿರುವ ವಯರ್ ಸಿಸ್ಟಮ್‌ನಲ್ಲಿ ಶಾರ್ಟ್ ಸರ್ಕೂ್ಯಟ್ ಉಂಟಾಗಿರುವುದು ಪತ್ತೆಯಾಗಿದೆ. ಕಾರಿನ ಬಾಗಿಲು ಲಾಕ್ ಆಗಿದ್ದ ಹಿನ್ನೆಲೆಯಲ್ಲಿ ದರ್ಶನ್ ಅವರಿಗೆ ತಕ್ಷಣ ಕಾರಿನಿಂದ ಹೊರಗಡೆ ಬರಲು ಸಾಧ್ಯವಾಗಿರಲಿಲ್ಲ ಎಂದು ಎಫ್‌ಎಸ್‌ಎಲ್ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!