ಅಪಹರಣವಾದ ಗಂಡು ಮಗು, ಆರೋಪಿಗಳ ಮಾಹಿತಿ ನೀಡಿ 25,000 ನಗದು ಗೆಲ್ಲಿ.! ದಾವಣಗೆರೆ ಪೊಲೀಸ್ ಪ್ರಕಟಣೆ
ದಾವಣಗೆರೆ: ಅಪಹರಣಕ್ಕೊಳಗಾದ ಒಂದು ದಿನದ ಗಂಡು ಮಗು ಮತ್ತು ಆರೋಪಿಗಳ ಬಗ್ಗೆ ಮಾಹಿತಿ ನೀಡಿದ ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯಿಂದ 25,000/- ರೂಗಳ ನಗದು ಬಹುಮಾನ ಘೋಷಣೆ ಮಾಡಲಾಗಿದೆ.
ದಿನಾಂಕ 17-03-2022 ರಂದು ಪಿರ್ಯಾದಿಯಾದ ಇಸ್ಮಾಯಿಲ್ ತಂದೆ ಕಟ್ಟಬಾವಿ ಜಮಾಲ್ ರಾಜ್ ಗುಂಡಿನ ಕೆರೆ, ಹರಪನಹಳ್ಳಿ ತಾ|| ರವರು ಠಾಣೆಗೆ ಹಾಜರಾಗಿ ದಿನಾಂಕ 15-03-2022 ರಂದು ಮದ್ಯಾಹ್ನ 2.30 ಗಂಟೆ ಸಮಯದಲ್ಲ. 108 ಅಂಬುಲೆನ್ಸ್ ನಲ್ಲಿ. ತನ್ನ ಹೆಂಡತಿಯಾದ ಸಲ್ಮಾಳನ್ನು ಹೆರಿಗೆಗಾಗಿ ದಾವಣಗೆರೆ ಚಾಮರಾಜ ಪೇಟೆ ಸರ್ಕಲ್ ನಲ್ಲಿರುವ ಮಹಿಳಾ & ಮಕ್ಕಳ ಹಳೆ ಹೆರಿಗೆ ಆಸ್ಪತ್ರೆಯಲ್ಲಿ ದಾಖಲಸಿದ್ದು, ಸಂಜೆ ಸಿಜೆರಿನ್ ಮಾಡಿದಾಗ ಗಂಡು ಮಗು ಜನಿಸಿದ್ದು, ಸದರಿ ಮಗುವನ್ನು ರಾತ್ರಿ ಸುಮಾರು 8.45 ಗಂಟೆಗೆ ಆಸ್ಪತ್ರೆಯ ನರ್ಸ್ ರವರು ಮಗುವನ್ನು ಪಾಲಕರಾದ ನಮಗೆ ಕೊಡದೇ ಬೇರೆಯವರಿಗೆ ಕೊಟ್ಟಿರುತ್ತಾರೆ. ಆದ್ದರಿಂದ ನನ್ನ ಮಗುವನ್ನು ತೆಗೆದುಕೊಂಡು ಹೋಗಿರುವ ಮಹಿಳೆ ಮೇಲೆ ಹಾಗೂ ಆಸ್ಪತ್ರೆಯ ಅಧಿಕಾರಿ ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಅಂತ ಇದ್ದ ದೂರಿನ ಮೇರೆಗೆ ದಾವಣಗೆರೆ ಮಹಿಳಾ ತಾನೆ ಗುನ್ನೆ ನಂ-47/2022 ಕಲಂ 363 ರೀತ್ಯಾ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಂಡಿರುತ್ತದೆ.
ಸದರಿ ಪ್ರಕರಣದಲ್ಲಿ ಅಪಹರಣ ಕ್ಕೊಳಗಾದ ಒಂದು ದಿನದ ಗಂಡು ಮಗು ಮತ್ತು ಆರೋಪಿಗಳ ಬಗ್ಗೆ ಮಾಹಿತಿ ನೀಡಿದ ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯಿಂದ ಶ್ರೀ ಸಿ.ಬಿ ರಿಷ್ಯಂತ್ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ದಾವಣಗೆರೆ ಜಿಲ್ಲೆರವರು 25,000/- ರೂಗಳ ನಗದು ಬಹುಮಾನವನ್ನು ಘೋಷಣೆ ಮಾಡಿರುತ್ತಾರೆ.
ನವಜಾತ ಶಿಶು ನಾಪತ್ತೆ ಪ್ರಕರಣ ಮಾಸುವ ಮುನ್ನ ಮತ್ತೊಂದು ಪ್ರಕರಣ ದಾವಣಗೆರೆ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಗರದ ಕೆ. ಆರ್. ಮಾರುಕಟ್ಟೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ. ಕಳೆದ ಕೆಲ ತಿಂಗಳ ಹಿಂದೆ ಇದೇ ಆಸ್ಪತ್ರೆಯಿಂದ ಹೆಣ್ಣು ಮಗು ನಾಪತ್ತೆಯಾದ ವಿಚಾರ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ನಡೆದಿದ್ದು, ಮಕ್ಕಳ ಮಾರಾಟ ಜಾಲದ ಜೊತೆಗೆ ಹಲವಾರು ಅನುಮಾನಗಳು ಕಾಡತೊಡಗಿದೆ. ಚಾಮರಾಜಪೇಟೆಯಲ್ಲಿರುವ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ನಿವಾಸಿಯಾದ ಉಮೇಸಲ್ಮಾ ಹಾಗೂ ಇಸ್ಮಾಯಿಲ್ ಜಬೀವುಲ್ಲಾ ದಂಪತಿಗೆ ಬುಧವಾರ ಸಂಜೆ ಗಂಡು ಮಗುವೊಂದು ಜನಿಸಿದೆ.
ಹೆರಿಗೆ ಬಳಿಕ ಸಂಬ0ಧಿಕರ ಕೈಗೆ ಮಗು ಕೊಡುವುದಾಗಿ ಆಸ್ಪತ್ರೆ ಸಿಬ್ಬಂದಿ ಹೇಳಿದ್ದರಂತೆ. ಹೆರಿಗೆ ಬಳಿಕ ತಂದೆ ಇಸ್ಮಾಯಿಲ್ ಜಬೀವುಲ್ಲಾನಿಗೆ ಶಿಶುವಿಗಾಗಿ ಬಟ್ಟೆ ತರಲು ಸಿಬ್ಬಂದಿ ಹೇಳಿದ್ದು, ಅವರು ಬಟ್ಟೆ ತರುವಷ್ಟರಲ್ಲಿ ಮಕ್ಕಳ ತೀವ್ರ ನಿಗಾ ಘಟಕದಲ್ಲಿದ್ದ ಶಿಶು ನಾಪತ್ತೆಯಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಇದೇ ವೇಳೆ ಶಿಶುವನ್ನು ಮಹಿಳೆಯೊಬ್ಬಳು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಪೊಲೀಸ್ ತನಿಖೆಯ ಬಳಿಕವೇ ಘಟನೆಯ ಸತ್ಯಾಸತ್ಯತೆ ತಿಳಿದುಬರಲಿದೆ.