ಕರ್ತವ್ಯದ ಅವಧಿಯಲ್ಲಿ ಅಧಿಕಾರ ದುರುಪಯೋಗ ; ಲೋಕಾಯುಕ್ತಕ್ಕೆ ದೂರು
ದಾವಣಗೆರೆ: ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯದ ಅವಧಿಯಲ್ಲಿ ಯಾವುದೇ ಖಾಸಗೀ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದೆಂದು ಸರ್ಕಾರದ ಕಟ್ಟುನಿಟ್ಟಿನ ಸೂಚನೆ ಮತ್ತು ಸುತ್ತೋಲೆಗಳಿವೆ. ಆದರೂ ಉನ್ನತ ಹುದ್ದೆಯಲ್ಲಿರುವ ಸರ್ಕಾರಿ ಅಧಿಕಾರಿಗಳಾದ ಜಿಲ್ಲಾಧಿಕಾರಿಗಳು, ಹೊನ್ನಾಳಿ ತಾ.ಪಂ ಕಾರ್ಯನಿರ್ವಹಣಾ ಅಧಿಕಾರಿ ಹಾಗೂ ಹೊನ್ನಾಳಿ ತಹಶೀಲ್ದಾರ್ ಅವರುಗಳು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿದ್ದಾರೆ ಆದ್ದರಿಂದ ಅವರ ವಿರುದ್ದ ಲೋಕಾಯುಕ್ತಕ್ಕೆ ದೂರುನೀಡಲಾಗಿದೆ ಎಂದು ಭ್ರಷ್ಟಾಚಾರ ವಿರೋಧಿ ವೇದಿಕೆ ಸಂಘಟನಾ ಕಾರ್ಯದರ್ಶಿ ಹನುಮಂತಪ್ಪ ಸೊರಟೂರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2022ರ ಡಿಸೆಂಬರ್ 16ರಂದು ಹೊನ್ನಾಳಿಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯರ ಸಹೋದರನ ಪುತ್ರ ಆರ್. ಚಂದ್ರಶೇಖರ್ ಇವರ ಶ್ರದ್ಧಾಂಜಲಿಯ ಖಾಸಗಿ ಕಾರ್ಯಕ್ರಮದಲ್ಲಿ ಸರ್ಕಾರಿ ಕರ್ತವ್ಯದ ಅವಧಿಯಲ್ಲಿ ಭಾಗವಹಿಸಿದ್ದ ಸರ್ಕಾರಿ ಅಧಿಕಾರಿಗಳ ವಿರುದ್ಧ ಕರ್ತವ್ಯಲೋಪ, ಕರ್ತವ್ಯ,ಅಧಿಕಾರ ಮತ್ತು ಸರ್ಕಾರಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ 2023 ರ ಜನವರಿ 31ರಂದು ಬೆಂಗಳೂರಿನ ಘನ ಲೋಕಾಯುಕ್ತ ಮುಖ್ಯ ಕಛೇರಿಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಪಾಟೀಲ್ ರವರನ್ನು ಖುದ್ದು ಭೇಟಿಯಾಗಿ ದಾಖಲೆಗಳ ಸಮೇತ ದೂರು ಸಲ್ಲಿಸಲಾಗಿದೆ ಎಂದರು.
ಅಧಿಕಾರಿಗಳು ಕಾನೂನುಬದ್ಧವಾಗಿ ರಜೆಯನ್ನು ಹಾಕಿಕೊಂಡು ಅವರ ಸ್ವಂತ ಕಾರು-ಖರ್ಚಿನಲ್ಲಿ ಇಂತಹ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ನಮ್ಮದೇನೂ ತಕರಾರಿಲ್ಲ. ಆದರೆ ಸಾರ್ವಜನಿಕರ ತೆರಿಗೆ ಹಣದಲ್ಲಿ ಆ ದಿನದ ಸಂಬಳ ಪಡೆದು ಮತ್ತು ಎಲ್ಲಾ ಸರ್ಕಾರಿ ಸೌಲಭ್ಯ ಗಳನ್ನು ದುರುಪಯೋಗಪಡಿಸಿಕೊಂಡು, ಕಛೇರಿಗೆ ಬರುವ ಜನಸಾಮಾನ್ಯರಿಗೆ ತೊಂದರೆ ಮಾಡಿ ಇಂತಹ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ತಪ್ಪು ಮತ್ತು ಸಂವಿಧಾನ ವಿರೋಧಿಯಾಗುತ್ತದೆ. ಆದ್ದರಿಂದ ನಾವು ಈ ತರಹದ ಪ್ರಕರಣಗಳು ಮುಂದಿನ ದಿನಗಳಲ್ಲಿ ಮರುಕಳಿಸಬಾರದು, ಸಾರ್ವಜನಿಕ ತೆರಿಗೆ ಹಣ ದುರುಪಯೋಗಬಾರದು ಮತ್ತು ಸಾರ್ವಜನಿಕರ ಹಿತದೃಷ್ಟಿಯ ಸದ್ದುದೇಶದಿಂದ ಈ ದೂರನ್ನು ದಾಖಲಿಸಿದ್ದೇವೆ ಎಂದರು.