ಎಸಿಬಿ ರೈಡ್ : ರಾಜ್ಯದ 18 ಕಡೆ ದಾಳಿ ಮನೆಯಲ್ಲಿ ಚಿನ್ನ, ನೋಟು ಎಣಿಸುವ ಯಂತ್ರ, 12 ಲಕ್ಷ ವೆಚ್ಚದ ಸ್ಟೀಂ ಬಾತ್ ಟಬ್ ಕಂಡು ದಂಗಾದ ಅಧಿಕಾರಿಗಳು
ಬೆಂಗಳೂರು: ಬುಧವಾರ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಅಕ್ರಮ ಹಾದಿಯಲ್ಲಿ ಹಣ ಸಂಪಾದಿಸಿರುವ ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ಕಂತೆ ಕಂತೆ ಹಣ, ಚಿನ್ನ, ನೋಟು ಎಣಿಸುವ ಯಂತ್ರ, ಶ್ರೀಗಂಧದ ಕಟ್ಟಿಗೆ ಸೇರಿದಂತೆ ಇತರೆ ಅಕ್ರಮ ಸಂಪತ್ತನ್ನು ವಶಕ್ಕೆ ಪಡೆದಿದ್ದಾರೆ. ಬುಧವಾರ ಬೆಳಿಗ್ಗೆ ಕಾರ್ಯಾಚರಣೆಗೆ ಇಳಿದಿರುವ ಎಸಿಬಿ ಪೊಲೀಸರು 18 ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿದ್ದಾರೆ. 78 ಸ್ಥಳಗಳಲ್ಲಿ ದಾಳಿ ನಡೆದಿದ್ದು, 100ಕ್ಕೂ ಹೆಚ್ಚಿನ ಅಧಿಕಾರಿಗಳು ಮತ್ತು 300ಕ್ಕೂ ಹೆಚ್ಚಿನ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
* ಬಾದಾಮಿ ವಲಯ ಅರಣ್ಯಾಧಿಕಾರಿ ಶಿವಾನಂದ ಖೇಡಗಿ:
ಬಾದಾಮಿ ವಲಯ ಅರಣ್ಯಾಧಿಕಾರಿ ಶಿವಾನಂದ ಖೇಡಗಿ ಮನೆಯಲ್ಲಿ 3 ಕೆಜಿಗೂ ಹೆಚ್ಚಿನ ಶ್ರೀಗಂಧದ ಕಟ್ಟಿಗೆ ದೊರತಿದೆ. ಜೊತೆಗೆ ಒಂದು ಕೆ.ಜಿ.ಗೂ ಅಧಿಕ ಚಿನ್ನಾಭರಣಗಳು, 4 ಕೆ.ಜಿ. ಬೆಳ್ಳಿಯ ವಸ್ತುಗಳು ಪತ್ತೆಯಾಗಿವೆ. ಇದಲ್ಲದೆ, ಸಂಬAಧಿಕರ ಮನೆಯಲ್ಲಿಯೂ ಹಣ ಇರುವುದು ಪತ್ತೆಯಾಗಿದೆ. ಜೊತೆಗೆ 16 ಲಕ್ಷ ರೂಪಾಯಿ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿರುವುದರ ದಾಖಲೆ ಪತ್ರಗಳನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಿಚಿತ್ರ ಎಂದರೆ ಒಬ್ಬ ಸರ್ಕಾರಿ ಅಧಿಕಾರಿಯಾಗಿರುವ ಶಿವಾನಂದ ಮನೆಯಲ್ಲಿ ನೋಟು ಎಣಿಸುವ ಯಂತ್ರ ಸಹ ಪತ್ತೆಯಾಗಿದೆ. ಸಾಮಾನ್ಯವಾಗಿ ಬ್ಯಾಂಕ್‌ಗಳಲ್ಲಿ ಕಾಣಿಸುವಂತಹ ಈ ಯಂತ್ರ ಸರ್ಕಾರಿ ಅಧಿಕಾರಿಯ ಮನೆಯಲ್ಲಿ ಏಕೆ ಇದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಶ್ರೀಗಂಧದ ಕಟ್ಟಿಗೆ ಸಿಕ್ಕಿರುವ ಕಾರಣ ಶಿವಾನಂದ ಶ್ರೀಗಂಧದ ಕಟ್ಟಿಗೆ ಖರೀದಿಸಿರುವುದಕ್ಕೆ ಅಧಿಕೃತ ದಾಖಲೆಗಳನ್ನು ಒದಗಿಸಬೇಕು. ಇಲ್ಲದಿದ್ದರೆ, ಅಕ್ರಮ ಆಸ್ತಿ ಸಂಪಾದನೆಯ ಜೊತೆಗೆ ಅರಣ್ಯ ಸಂರಕ್ಷಣೆ ಕಾಯ್ದೆಯಡಿ ಪ್ರತ್ಯೇಕ ಪ್ರಕರಣವೂ ದಾಖಲಾಗುವ ಸಾಧ್ಯತೆ ಇದೆ.
• ಕೊಪ್ಪಳದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಎಇ ಗಿರೀಶ್ ಮನೆ ಮೇಲೆ ದಾಳಿ :
ಕೊಪ್ಪಳದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಎಇ ಗಿರೀಶ್ ಮನೆ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು ನೀರಿನ ಟ್ಯಾಂಕ್ ಪರಿಶೀಲನೆ ಮಾಡಿದ್ದಾರೆ. ದಾಳಿಯ ಮುನ್ಸೂಚನೆ ದೊರೆತು ನೀರಿನ ಟ್ಯಾಂಕ್‌ನಲ್ಲಿ ವಸ್ತುಗಳನ್ನು ಇಟ್ಟಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆದರೆ, ಈ ಬಗ್ಗೆ ಇನ್ನಷ್ಟೆ ಮಾಹಿತಿ ಬರಬೇಕಿದೆ. ಮನೆ ಪಕ್ಕದಲ್ಲಿ ನಿಂತಿದ್ದ ಕಾರಿನ ಬಗ್ಗೆ ವಿಚಾರಿಸಿದಾಗ ಈ ಕಾರು ನನ್ನದಲ್ಲ ಎಂದು ಗಿರೀಶ ಹೇಳಿದ್ದಾರೆ. ಬಳಿಕ ಕಾರನ್ನು ತಪಾಸಣೆ ಮಾಡಿದಾಗ ಗಿರೀಶ್‌ಗೆ ಸಂಬಂಧಿಸಿದ ಮನೆಗಳ ದಾಖಲೆ ಪತ್ರಗಳು ಕಾರಿನಲ್ಲಿ ಲಭ್ಯವಾಗಿವೆ ಎಂದು ಹೇಳಲಾಗುತ್ತಿದೆ.
• ವಿಜಯಪುರ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಗೋಪಿನಾಥ್ ಸಾ ಎನ್. ಮಾಳಗಿ :
ವಿಜಯಪುರ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಗೋಪಿನಾಥ್ ಸಾ ಎನ್. ಮಾಳಗಿ ಅವರ ಮನೆಯಲ್ಲಿ ನೆಕ್ಲೆಸ್, ಚಿನ್ನದ ಸರ, ಉಂಗುರುಗಳು ಹೀಗೆ ತರಹೇವಾರಿ ಚಿನ್ನ ಪತ್ತೆಯಾಗಿದೆ. ವಿಶೇಷ ಎಂದರೆ ಗೋಪಿನಾಥ್ ತಮ್ಮ ಬಾತ್‌ರೂಮ್‌ನಲ್ಲಿ 12 ಲಕ್ಷ ಬೆಲೆಬಾಳುವ ಸ್ಟೀಂ ಬಾತ್ ಟಬ್ ಅಳವಡಿಸಿದ್ದಾರೆ. ಹೀಗೆ ಬಾತ್‌ರೂಂ ನಿರ್ಮಾಣಕ್ಕಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವುದು ಎಸಿಬಿ ಅಧಿಕಾರಿಗಳ ಹುಬ್ಬೇರಿಸುವಂತೆ ಮಾಡಿದೆ.