ಆನಗೋಡು ಬಳಿ ಅಪಘಾತ: ರಾಮನಗರದ ಮೂವರು ಯುವಕರ ಸಾವು

ರಾಮನಗರದ ಮೂವರು ಯುವಕರ ಸಾವು
ದಾವಣಗೆರೆ: ಬೈಕ್‌ಗೆ ಲಾರಿಯೊಂದು ಡಿಕ್ಕಿ ಹೊಡೆದು ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ದಾವಣಗೆರೆ ತಾಲ್ಲೂಕು ಆನಗೋಡು ಸಮೀಪ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶುಕ್ರವಾರ ನಡೆದಿದೆ.
ದಾವಣಗೆರೆ ನಗರದ ರಾಮನಗರದ ನಿವಾಸಿಗಳಾದ ಸಂದೇಶ್ (23) ಪರಶುರಾಮ್ (24) ಹಾಗೂ ಶಿವು (26) ಮೃತ ದುರ್ದೈವಿಗಳು.
ಈ ಮೂವರು ವಿವಿಧ ಮಿಲ್‌ಗಳಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಈ ಮೂವರು ದಾವಣಗೆರೆ ತಾಲ್ಲೂಕಿನ ಕಾಟಿಹಳ್ಳಿ ಗ್ರಾಮದಲ್ಲಿ ಸಂಬಂಧಿಕರ ಮನೆಯಲ್ಲಿ ದೇವಿಕಾರ್ಯದಲ್ಲಿ ಊಟ ಮಾಡಿ ವಾಪಸ್ಸಾಗುವ ಈ ವೇಳೆ ಲಾರಿ ಡಿಕ್ಕಿ ಹೊಡೆದು ಹೋಗಿದೆ. ಲಾರಿ ಚಾಲಕನ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.
ನಾಗರಾಜ್ ಹಾಗೂ ರತ್ನಮ್ಮ ದಂಪತಿಯ ಪುತ್ರ ಪರಶುರಾಮ್ ಅವರಿಗೆ ಒಂದುವರೆ ವರ್ಷಗಳ ಹಿಂದಷ್ಟೇ ವಿವಾಹವಾಗಿದ್ದು, ಪತ್ನಿ 7 ತಿಂಗಳ ಗರ್ಭಿಣಿ. ತಂದೆ–ತಾಯಿ ಇಲ್ಲದ ಶಿವು ಅಜ್ಜಿಯ ಆರೈಕೆಯಲ್ಲಿ ಬೆಳೆದಿದ್ದರು.
ಮುಂಜಾನೆ 3 ಗಂಟೆಗೆ ಶವಗಳನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ತರಲಾಗಿತ್ತು. ಮೃತರ ಸಂಬಂಧಿಕರು ಆಸ್ಪತ್ರೆಯ ಶವಾಗಾರದ ಬಳಿ ನೆರೆದಿದ್ದರು. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
ಕೂಲಿ ಕೆಲಸ ಮಾಡುತ್ತಿದ್ದ ಇವರು ಸ್ವಲ್ಪ ಕೆಲಸ ಇದೆ ವಾಪಸ್ ಬರುತ್ತೇವೆ ಎಂದು ಹೇಳಿ ಹೋದರು. ಆದರೆ ವಾಪಸ್ ಬರಲಿಲ್ಲ’ ಎಂದು ಮೃತರ ಸಂಬಂಧಿಕರು ಅಳಲು ತೋಡಿಕೊಂಡರು.
ಬೇರೆಯವರ ಮನೆಯಲ್ಲಿ ದುಡಿದು ನಿನ್ನನ್ನು ಸಾಕಿದ್ದೆ. ನಿನಗೆ ಈ ರೀತಿಯ ಸಾವು ಬರಬಾರದಿತ್ತು. ನನಗಾದರೂ ಸಾವು ಬರಬಾರದಿತ್ತೇ ಎಂದು ಪರಶುರಾಮ್ ಅವರ ತಾಯಿ ರತ್ನಮ್ಮ ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು. ದಾವಣಗೆರೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ನೀಡಿದ್ದಾರೆ.