ರಾಜ್ಯ ಸುದ್ದಿ

ಏರೋ ಇಂಡಿಯಾ 2023: ಫೆ.15ರಂದು ‘ಬಂಧನ್ ಕಾರ್ಯಕ್ರಮ’ದಲ್ಲಿ ರಕ್ಷಣಾ ಸಚಿವರು ಭಾಗಿ

ಬೆಂಗಳೂರು: ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ 2023ರ ನೇಪಥ್ಯದಲ್ಲಿ 15 ಫೆಬ್ರವರಿ 2023ರಂದು ಬಂಧನ್ ಕಾರ್ಯಕ್ರಮವು ನಡೆಯಲಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಮತ್ತಿತರರ ಗಣ್ಯರು ಉಪಸ್ಥಿತರಿರುವರು. ಪ್ರಮುಖ ಖಾಸಗಿ ರಕ್ಷಣಾ ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ)ಗಳು ಮತ್ತು ರಕ್ಷಣಾ ವಲಯದ ಪ್ರಮುಖ ಸಾರ್ವಜನಿಕ ಉದ್ಯಮಗಳ (ಡಿಪಿಎಸ್‌ಯು) ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಬಂಧನ್ ಕಾರ್ಯಕ್ರಮ ದೇಶದಲ್ಲಿ ರಕ್ಷಣಾ ಉತ್ಪಾದನಾ ವಲಯದ ನವೀನ ಸಹಯೋಗ ಮತ್ತು ಕಾರ್ಯತಂತ್ರದ ಪರಿವರ್ತನೆಗಾಗಿ ವ್ಯಾಪಾರ ಘಟಕಗಳ ನಡುವೆ ಸಹಭಾಗಿತ್ವವನ್ನು ರೂಪಿಸುವ ಮತ್ತು ನವೀಕರಿಸುವ ಗುರಿಯನ್ನು ಹೊಂದಿದೆ. ಇದು ಡಿಪಿಎಸ್‌ಯುಗಳು, ಖಾಸಗಿ ರಕ್ಷಣಾ ಕಂಪನಿಗಳು ಮತ್ತು ವಿದೇಶಿ ಮಾರಾಟಗಾರರಿಗೆ ರಕ್ಷಣಾ ಸಹಯೋಗ ಮತ್ತು ಸಹಕಾರವನ್ನು ಹೆಚ್ಚಿಸಲು ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲು ಇದು ಸೂಕ್ತ ವೇದಿಕೆಯನ್ನು ಒದಗಿಸಿಕೊಡುತ್ತದೆ. ಜತೆಗೆ ಇದು ದೇಶೀಯ ರಕ್ಷಣಾ ಪೂರಕ ವ್ಯವಸ್ಥೆಯನ್ನು ಬಲವರ್ಧನೆಗೊಳಿಸುತ್ತದೆ ಮತ್ತು ರಕ್ಷಣಾ ಉತ್ಪಾದನೆ ಮತ್ತು ರಫ್ತಿಗೆ ಹೆಚ್ಚಿನ ಉತ್ತೇಜನವನ್ನು ನೀಡುತ್ತದೆ.
ಬಂಧನ ಕಾರ್ಯಕ್ರಮದಲ್ಲಿ ಕರ್ನಾಟಕದ ಕೈಗಾರಿಕೆಗಳಿಂದ ಮಹತ್ವದ ಒಡಂಬಡಿಕೆಗಳು, ಡಿಆರ್‌ಡಿಒದಿಂದ ತಂತ್ರಜ್ಞಾನ ವರ್ಗಾವಣೆ ಒಪ್ಪಂದ ಮತ್ತು ಖಾಸಗಿ ಹಾಗೂ ಸಾರ್ವಜನಿಕ ವಲಯದಿಂದ ಉತ್ಪನ್ನ ಬಿಡುಗಡೆ ಹಾಗೂ ಪ್ರಮುಖ ಘೋಷಣೆಗಳು ಸೇರಿದಂತೆ ಗಣನೀಯ ಸಂಖ್ಯೆಯ ಒಡಂಬಡಿಕೆಗಳಿಗೆ ಅಂಕಿತ ಹಾಕುವುದಕ್ಕೆ ಸಾಕ್ಷಿಯಾಗಲಿದೆ. ಈ ಬಿ2ಬಿ ಸಭೆಗಳು ವಿಪುಲ ವ್ಯಾಪಾರ ಸಾಮರ್ಥ್ಯವನ್ನು ಹೊಂದಿವೆ ಮತ್ತು ಭಾರತೀಯ ರಕ್ಷಣಾ ಕಂಪನಿಗಳ ಜಾಗತಿಕ ಸಹಭಾಗಿತ್ವವನ್ನು ವೃದ್ಧಿಸಿಕೊಳ್ಳುವಲ್ಲಿ ಬಹಳ ದೂರ ಕ್ರಮಿಸಲಿವೆ. ಈ ತಿಳಿವಳಿಕೆ ಒಪ್ಪಂದಗಳು ಮತ್ತು ಟಿಒಟಿಗಳು ರಕ್ಷಣಾ ವಲಯದಲ್ಲಿ ಹೆಚ್ಚಿನ ಪ್ರಮಾಣದ ವಿದೇಶಿ ನೇರ ಬಂಡವಾಳದ ಹರಿವಿಗೆ ದಾರಿ ಮಾಡಿಕೊಡುವುದಲ್ಲದೆ, ರಕ್ಷಣಾ ಕೈಗಾರಿಕಾ ಕಾರಿಡಾರ್ಗಳಲ್ಲಿ ಉತ್ಪಾದನೆ ಹೆಚ್ಚಳ ಸೇರಿದಂತೆ ರಕ್ಷಣಾ ಉತ್ಪಾದನಾ ಸಾಮರ್ಥ್ಯವೃದ್ಧಿಗೆ ಅನುವು ಮಾಡಿಕೊಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!