ದಕ್ಷಿಣದಲ್ಲಿ ಕಮಲ ಅರಳುವುದು ಖಚಿತ ಅಜಯ್ ಕುಮಾರ್ ನಾಮಪತ್ರ ಸಲ್ಲಿಸಿದ ಅಜಯ
ದಾವಣಗೆರೆ: ಮಹಾನಗರ ಪಾಲಿಕೆ ಸದಸ್ಯರು, ಮಾಜಿ ಮಹಾಪೌರರು ಆಗಿದ್ದ ಬಿ.ಜಿ. ಅಜಯ್ ಕುಮಾರ್ ಅವರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದರು. ಮಹಾನಗರ ಪಾಲಿಕೆಗೆ ತೆರಳಿ ನಗರ ಪಾಲಿಕೆ ಆಯುಕ್ತರು ಆದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ರೇಣುಕಾ ಅವರಿಗೆ ಮೊದಲ ಹಂತದಲ್ಲಿ ಸಾಂಕೇತಿಕವಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ನಂತರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಸಿದ ಅಜಯ್ ಕುಮಾರ್ ಅವರು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಜನ ಬದಲಾವಣೆ ಬಯಸುತ್ತಿದ್ದಾರೆ. ಯುವಶಕ್ತಿಗೆ ಅವಕಾಶ ನೀಡಬೇಕೆಂಬ ಮನಸ್ಸು ದಕ್ಷಿಣ ಕ್ಷೇತ್ರದ ಜನತೆಗಿದೆ. ಹಾಗಾಗಿ ದಕ್ಷಿಣ ಕ್ಷೇತ್ರದಲ್ಲಿ ಬದಲಾವಣೆ ಪರ್ವ ಆರಂಭವಾಗಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಮಲ ಅರಳುವುದು ಖಚಿತ ಎಂದು ಬಿ.ಜಿ. ಅಜಯ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಪಕ್ಷದ ನಾಯಕರಗಳು, ಮುಖಂಡರು, ಕಾರ್ಯಕರ್ತರು ಪಕ್ಷದ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಕಮಲ ಪಕ್ಷವನ್ನು ನೂರಕ್ಕೆ ನೂರು ಈ ಬಾರಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅರಳಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತಿದ್ದೇವೆ. ಕೇಂದ್ರ ಹಾಗೂ ರಾಜ್ಯದಲ್ಲಿನ ನಮ್ಮ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದ ಕೆಲಸ ಕಾರ್ಯಗಳು ಮತ್ತು ಮಹಾಪೌರನಾಗಿ ಸಲ್ಲಿಸಿದ ಸೇವೆ ಅನುಸಾರ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಲಾಗುತ್ತಿದೆ. ಕ್ಷೇತ್ರದ ಜನರು ನನ್ನ ಸೇವ ಕಾರ್ಯವನ್ನ ಗುರುತಿಸಿದ್ದಾರೆ. ಕ್ಷೇತ್ರದ ಮಗನಾಗಿ ಮತಯಾಚನೆ ಮಾಡುತ್ತಿದ್ದು, ಅವಕಾಶವನ್ನ ನೀಡಿದರೆ ಸದಾ ನಿಮ್ಮ ಮಗನಾಗಿ ಜೊತೆಯಲ್ಲಿದ್ದು ಸೇವೆ ಮಾಡುವ ಹಂಬಲ ನನಗಿದೆ ಎಂದು ತಿಳಿಸಿದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಸಾಕಷ್ಟಿದ್ದು, ಸರ್ವತೋಮುಖ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ರೂಪಿಸುವ ಚಿಂತನೆ ನನಗಿದೆ ಎಂದು ಸದಾಶಯ ವ್ಯಕ್ತಪಡಿಸಿದರು.
ತಮ್ಮ ಪಕ್ಷದಲ್ಲಿ ಸಾಕಷ್ಟು ಆಕಾಂಕ್ಷಿಗಳಿದ್ರು ತಮಗೆ ಏಕೆ ಈ ಒಂದು ಅವಕಾಶ ಸಿಕ್ಕಿತ್ತು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅಜಯ್ ಕುಮಾರ್, ಪಕ್ಷದ ವರಿಷ್ಠರ ತೀರ್ಮಾನದಂತೆ ನನಗೊಂದು ಅವಕಾಶ ಸಿಕ್ಕಿದ್ದು, ಇದಕ್ಕೆ ದಾವಣಗೆರೆ ಜಿಲ್ಲೆಯ ನಾಯಕರು, ಮುಖಂಡರುಗಳ ಬೆಂಬಲವು ಸಹ ಇದೆ. ಇದಕ್ಕೆ ನಾನು ಚಿರಋಣಿ. ನನ್ನ ಮೇಲೆ ನಂಬಿಕೆ ಇಟ್ಟು ಪಕ್ಷದ ವರಿಷ್ಠರು ನೀಡಿರುವ ಈ ಅವಕಾಶಕ್ಕೆ ನ್ಯಾಯ ಒದಗಿಸುವೆ ಎಂದರು.
20ರಂದು ಬೃಹತ್ ಮೆರವಣಿಗೆಯೊಂದಿಗೆ ಉಮೇದುವಾರಿಕೆ : ಇದೇ ಏಪ್ರಿಲ್ 20ರಂದು ಬೃಹತ್ ಮೆರವಣಿಗೆಯೊಂದಿಗೆ ಕೊನೆಯದಾಗಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸುತ್ತೇನೆ ಎಂದರು.