ಹಳೇ ಕುಂದವಾಡದಲ್ಲಿ ಅಜ್ಜಯ್ಯನ ಪಳ್ಹಾರ ಸೇವೆ ಲೌಕಿಕ ಬದುಕಿನಲ್ಲಿ ಭೋಗ-ಭಾಗ್ಯಗಳ ಅಪೇಕ್ಷೆ ಮುಖ್ಯವಲ್ಲ : ಕಬ್ಬಿಣ ಕಂತಿಮಠದ ಶಿವಲಿಂಗ ಶ್ರೀ

ದಾವಣಗೆರೆ: ಭಗವಂತನ ಅನುಗ್ರಹ ಮತ್ತು ನಿಮ್ಮ ಶ್ರಮದ ಪ್ರಯತ್ನದಿಂದ ಜೀವನದಲ್ಲಿ ಇಷ್ಟಾರ್ಥ ಸಿದ್ದಿ ಸಾಧ್ಯ ಎಂದು ರಟ್ಟಿಹಳ್ಳಿಯ ಕಬ್ಬಿಣ ಕಂತಿಮಠ ಶ್ರೀ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು. ಅವರು, ಬುಧವಾರ ಇಲ್ಲಿಗೆ ಸಮೀಪದ ಹಳೇ ಕುಂದವಾಡ ಗ್ರಾಮದಲ್ಲಿರುವ ಶ್ರೀ ಕರಿಬಸವೇಶ್ವರ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ಮಹಾಶಿವರಾತ್ರಿ ಅಂಗವಾಗಿ 9 ದಿನಗಳ ಕಾಲ ನಡೆದ ವಿಶೇಷ ಪೂಜೆ ಮತ್ತು ಸ್ವಾಮಿಯ ಪಳ್ಹಾರ ಪ್ರಸಾದ ವಿನಿಯೋಗ ಹಾಗೂ ಮಾತೃಶ್ರೀ ರಾಜಮಾತೆ ಅವರ ಮೂವತ್ತನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.
ಲೌಕಿಕ ಬದುಕಿನಲ್ಲಿ ಭೋಗ-ಭಾಗ್ಯಗಳ ಅಪೇಕ್ಷೆ ಮುಖ್ಯವಲ್ಲ. ಅದೇ ಪರಮ ಗುರಿಯೂ ಅಲ್ಲ. ಅದಕ್ಕೂ ಮೀರಿದೊಂದಿದ್ದರೆ ಅದೇ ಭಗವಂತನ ಸಾಕ್ಷಾತ್ಕಾರ. ಅದಕ್ಕೆ ಭಗವಂತನಿಗೆ ಮೆಚ್ಚುವಂತಿರಬೇಕು ಎಂದು ತಿಳಿಸಿದರು. ಪಂಚಭೂತಗಳಿಂದ ಹುಟ್ಟಿದ ಬಂದ ಮೇಲೆ ಒಂದಿಲ್ಲೊಂದು ದಿನ ಪಂಚಭೂತಗಳಲ್ಲಿ ಸಾವು ಕಾಣುತ್ತೇವೆ. ಚಿರಂಜೀವಿ ಎಂಬ ಬಿರುದು ಪಡೆದ ಅಶ್ವತ್ಥಾಮನನ್ನೇ ಸಾವು ಬಿಡಲಿಲ್ಲ. ಪುಣ್ಯ ಭೂಮಿಯಲ್ಲಿ ಯಾರೂ ಶಾಶ್ವತವಲ್ಲ. ಹಾಗಾಗಿ ಶಾಂತಿ, ನೆಮ್ಮದಿಗಾಗಿ ಧಾರ್ಮಿಕತೆ ಮೈಗೂಡಿಸಿಕೊಳ್ಳುವ ಜೊತೆಗೆ ನಮ್ಮ ದುಡಿಮೆಯಲ್ಲಿ ಅಲ್ಪವನ್ನಾದರೂ ದಾನ-ಧರ್ಮ, ಉಪಕಾರ ಮಾಡಿದಾಗ ಜೀವನದಲ್ಲಿ ಶಾಂತಿ, ನೆಮ್ಮದಿ ಸಿಗಲಿದೆ ಎಂದು ಹೇಳಿದರು.
ಬದುಕಿನಲ್ಲಿ ಅತೃಪ್ತರಾಗಬಾರದು. ಅತೃಪ್ತಿ ಕೊರತೆ ಇದೆ ಎಂದಾದರೆ ಜೀವನ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದರ್ಥ ಎಂದರು. ಹಳೇ ಕುಂದವಾಡದ ಶ್ರೀ ಕರಿಬಸವೇಶ್ವರ ಸ್ವಾಮಿ ಪುಣ್ಯಕ್ಷೇತ್ರದ ಧರ್ಮಾಧಿಕಾರಿ ಶ್ರೀ ಜೆ. ರಾಜಣ್ಣ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಿಗಂದೂರು ಪುಣ್ಯ ಕ್ಷೇತ್ರದ ಧರ್ಮದರ್ಶಿಗಳಾದ ರಾಮಣ್ಣ ಅವರ ಸಾನಿಧ್ಯ ವಹಿಸಿದ್ದರು. ಈ ಪೂಜಾ ಸೇವಾ ಕಾರ್ಯದಲ್ಲಿ ಬಿಐಇಟಿ ಕಾಲೇಜಿನ ಪ್ರಾಂಶುಪಾಲರಾದ ಹೆಚ್.ಬಿ. ಅರವಿಂದ್ ಸೇರಿದಂತೆ ಗಣ್ಯರು, ಹಳೇಕುಂದವಾಡದ ಶ್ರೀ ಕರಿಬಸವೇಶ್ವರ ಸ್ವಾಮಿಯ ಟ್ರಸ್ಟ್ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು. ನಂತರ ಅನ್ನಸಂತರ್ಪಣೆ ನಡೆಯಿತು. ಬೆಂಗಳೂರಿನ ಉದ್ಯಮಿ ವಿ. ಕಿರಣ್ ಕುಮಾರ್ ಅವರು ತಮ್ಮ ತಂದೆ ಟಿ. ವೆಂಕಟೇಶ್ ಅವರ ಸ್ಮರಣಾರ್ಥವಾಗಿ ಬಾಡಾ ಕ್ರಾಸ್ ನಲ್ಲಿರುವ ವೀರೇಶ್ವರ ಪುಣ್ಯಾಶ್ರಮದ ಮಕ್ಕಳಿಗೆ ವೀಣೆ ಸಮರ್ಪಿಸಿದರು.