ವಿವಿಧ ಬೇಡಿಕೆಗೆ ಆಗ್ರಹಿಸಿ ಅಖಿಲ ಭಾರತ ಯುವಜನ ಫೆಡರೇಶನ್ ಪ್ರತಿಭಟನೆ
ದಾವಣಗೆರೆ: ಯುವಜನರಿಗೆ ಉದ್ಯೋಗ ಭದ್ರತೆ ಕಲ್ಪಿಸಲು ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೆ ತರಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ನಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ಅಖಿಲ ಭಾರತ ಯುವಜನ ಫೆಡರೇಷನ್‌ನ ಜಿಲ್ಲಾ ಮಂಡಳಿಯಿಂದ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಮುಖಾಂತರ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಐವೈಎಫ್ ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು, ದೇಶದಲ್ಲಿ ಪ್ರಸ್ತುತ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದ್ದು, ಉದ್ಯೋಗ ಇಲ್ಲದೆ ಯುವಜನರ ಬದುಕು ನಾಶವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಸಂದರ್ಭದಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಭರವಸೆ ಸಂಪೂರ್ಣ ಸುಳ್ಳಾಗಿದೆ ಎಂದು ಆರೋಪಿಸಿದರು.
ದೇಶದ ಯುವಜನರಿಗೆ ಉದ್ಯೋಗ ಕಲ್ಪಿಸಲಿಕ್ಕಾಗಿ ಭಗತ್‌ಸಿಂಗ್ ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೆ ತರಬೇಕು. ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ಉದ್ಯಮಗಳಲ್ಲಿರುವ ಖಾಲಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು. ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರೆಯುವ ವರೆಗೂ ಮಾಸಿಕ 10 ಸಾವಿರ ರೂ. ನಿರುದ್ಯೋಗ ಭತ್ಯೆ ನೀಡಬೇಕು. ಬಿಎಸ್‌ಎನ್‌ಎಲ್, ಎಲ್‌ಐಸಿ, ರೈಲ್ವೆ, ಬ್ಯಾಂಕ್‌ಗಳನ್ನು ಖಾಸಗಿಕರಣಗೊಳಿಸುವ ಹುನ್ನಾರವನ್ನು ಸರ್ಕಾರ ತಕ್ಷಣ ಕೈಬಿಡಬೇಕು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಗೃಹ ಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕೃಷಿ ಕಾಯ್ದೆಗಳನ್ನು ತಕ್ಷಣವೇ ಹಿಂಪಡೆಯ ಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಐವೈಎಫ್ ಜಿಲ್ಲಾಧ್ಯಕ್ಷ ಕೆರನಹಳ್ಳಿ ರಾಜು, ಜಿಲ್ಲಾ ಕಾರ್ಯದರ್ಶಿ ಎ.ತಿಪ್ಪೇಶಿ, ಜೀವನ್ ನಿಟ್ಟುವಳ್ಳಿ, ಗದಿಗೇಶ್ ಪಾಳೇದ್, ಇರ್ಫಾನ್, ಮಂಜುನಾಥ್ ಎಂ.ಎಚ್, ಮಂಜುನಾಥ್ ದೊಡ್ಡಮನೆ, ಮಂಜುನಾಥ್ ಹರಳಯ್ಯನಗರ, ರುದ್ರೇಶ್ ಮಳಲಕರೆ, ಅಂಜಿನಪ್ಪ ಮಳಲಕೆರೆ, ಲೋಹಿತ್, ಫಜುಲುಲ್ಲಾ, ಹನುಮಂತಪ್ಪ, ಮಂಜುನಾಥ್ ಆರ್, ಇರ್ಫಾನ್ ಅಹ್ಮದ್, ತಿಪ್ಪೇಶ್ ಹೊನ್ನೂರು, ಅಫ್ರೂಜ್, ಸಂತೋಷ ದೊಡ್ಡಮನೆ ಮತ್ತಿತರರು ಇದ್ದರು.