ಎಲ್ಲಾ ಹಿಂದುಳಿದವರಿಗೆ ಧಾರ್ಮಿಕ ಸಮಾನತೆ ಸಿಗಬೇಕಾಗಿದೆ: ಸಿರಿಗೆರೆ ಶ್ರೀ

ಸಿರಿಗೆರೆ ಶ್ರೀ
ದಾವಣಗೆರೆ: ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಸಿಕ್ಕರೆ ಸಾಲದು ಎಲ್ಲಾ ಹಿಂದುಳಿದವರಿಗೆ ಧಾರ್ಮಿಕ ಸಮಾನತೆ ಸಿಗಬೇಕಾಗಿದೆ ಎಂದು ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾಯಶ ಶ್ರೀಗಳು ಹೇಳಿದರು.
ಹರಿಹರದ ರಾಜನಹಳ್ಳಿಯಲ್ಲಿನ ವಾಲ್ಮೀಕಿ ಗುರುಪಿಠದಲ್ಲಿ ಆಯೋಜಿಸಲಾಗಿದ್ದ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದುಳಿದ ಜನಾಂಗಕ್ಕೆ ಬಸವಣ್ಣವರು ಲಿಂಗದೀಕ್ಷೆ ನೀಡಿ ಸಾಮಾಜಿಕ ಕ್ರಾಂತಿ ಮಾಡಿದ್ದರು. ಅವರಂತೆ ೧೯ನೇ ಶತಮಾನದಲ್ಲಿ ಸರ್ವರಿಗು ಎಂದು ಎಲ್ಲಾ ವರ್ಗದವರಿಗು ಸಮಾನ ಅವಕಾಶ ನೀಡಿದ್ದು ಸಿರಿಗೆರೆ ಶಿವಕುಮಾರಸ್ವಾಮಿಗಳು ಎಂದು ಹೇಳಿದರು.
ಇತ್ತಿಚೆಗೆ ಸರ್ಕಾರ ರೈತರ ಭೂಮಿ ಕೈಗಾರಿಕಾ ಉದ್ದೇಶಕ್ಕೆ ವಶಪಡಿಸಿಕೊಳ್ಳುತ್ತಿದೆ. ಕೈಗಾರಿಕಾ ಸ್ಥಾಪನೆಗೆ ಜಮೀನು ಪಡೆದರೇ ಅಂತಹ ಭೂಮಿಗೆ ಸರ್ಕಾರಕ್ಕೆ ಭೂಮಿ ನೀಡಿದ ರೈತನೇ ಮಾಲೀಕ ಆಗಬೇಕು. ರೈತನಿಂದ ಕಡಿಮೆ ದರದಲ್ಲಿ ಜಮೀನು ಪಡೆಯುವ ಉದ್ಯಮಿಗಳು, ಮಧ್ಯವರ್ತಿಗಳು ದುಪ್ಪಟ್ಟು ದರದಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದರು.
ಇದರಿಂದಾಗಿ ರೈತರು ಬೀದಿಪಾಲಾಗುತ್ತಿದ್ದಾನೆ. ಇದೇ ಕಾರಣಕ್ಕಾಗಿ ಭೂಮಿ ಕೊಟ್ಟ ಮಾಲೀಕ ರೈತನೇ ಆಗಿರಬೇಕು. ರೈತ ಪ್ರತಿ ವರ್ಷ ಆ ಜಮೀನಿನಲ್ಲಿ ತೆಗೆಯುವ ಆದಾಯದ ಹಣದಲ್ಲಿ ಇಂತಿಷ್ಟು ಹಣವನ್ನು ರೈತನಿಗೆ ಕೈಗಾರಿಕೋದ್ಯಮಿಗಳು ನೀಡಬೇಕು. ಇಂತಹ ಕಾನೂನು ಬಂದರೆ ಮಾತ್ರ ರೈತನ ಉದ್ದಾರ ಸಾಧ್ಯ. ಇಂತಹ ಕನೂನು ದೇಶದಲ್ಲಿ ಜಾರಿಗೆ ಬರಬೇಕು ಎಂದರು.