ನವಜಾತ ಶಿಶು ನಾಪತ್ತೆ ಪ್ರಕರಣ ಮಾಸುವ ಮುನ್ನ ಮತ್ತೊಂದು ಪ್ರಕರಣ: ದಾವಣಗೆರೆ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮತ್ತೊಂದು ಮಗು ನಾಪತ್ತೆ
ದಾವಣಗೆರೆ: ನವಜಾತ ಶಿಶು ನಾಪತ್ತೆ ಪ್ರಕರಣ ಮಾಸುವ ಮುನ್ನ ಮತ್ತೊಂದು ಪ್ರಕರಣ ದಾವಣಗೆರೆ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಗರದ ಕೆ. ಆರ್. ಮಾರುಕಟ್ಟೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ. ಕಳೆದ ಕೆಲ ತಿಂಗಳ ಹಿಂದೆ ಇದೇ ಆಸ್ಪತ್ರೆಯಿಂದ ಹೆಣ್ಣು ಮಗು ನಾಪತ್ತೆಯಾದ ವಿಚಾರ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ನಡೆದಿದ್ದು, ಮಕ್ಕಳ ಮಾರಾಟ ಜಾಲದ ಜೊತೆಗೆ ಹಲವಾರು ಅನುಮಾನಗಳು ಕಾಡತೊಡಗಿದೆ. ಚಾಮರಾಜಪೇಟೆಯಲ್ಲಿರುವ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ನಿವಾಸಿಯಾದ ಉಮೇಸಲ್ಮಾ ಹಾಗೂ ಇಸ್ಮಾಯಿಲ್ ಜಬೀವುಲ್ಲಾ ದಂಪತಿಗೆ ಬುಧವಾರ ಸಂಜೆ ಗಂಡು ಮಗುವೊಂದು ಜನಿಸಿದೆ. ಹೆರಿಗೆ ಬಳಿಕ ಸಂಬ0ಧಿಕರ ಕೈಗೆ ಮಗು ಕೊಡುವುದಾಗಿ ಆಸ್ಪತ್ರೆ ಸಿಬ್ಬಂದಿ ಹೇಳಿದ್ದರಂತೆ. ಹೆರಿಗೆ ಬಳಿಕ ತಂದೆ ಇಸ್ಮಾಯಿಲ್ ಜಬೀವುಲ್ಲಾನಿಗೆ ಶಿಶುವಿಗಾಗಿ ಬಟ್ಟೆ ತರಲು ಸಿಬ್ಬಂದಿ ಹೇಳಿದ್ದು, ಅವರು ಬಟ್ಟೆ ತರುವಷ್ಟರಲ್ಲಿ ಮಕ್ಕಳ ತೀವ್ರ ನಿಗಾ ಘಟಕದಲ್ಲಿದ್ದ ಶಿಶು ನಾಪತ್ತೆಯಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇದೇ ವೇಳೆ ಶಿಶುವನ್ನು ಮಹಿಳೆಯೊಬ್ಬಳು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಪೊಲೀಸ್ ತನಿಖೆಯ ಬಳಿಕವೇ ಘಟನೆಯ ಸತ್ಯಾಸತ್ಯತೆ ತಿಳಿದುಬರಲಿದೆ.