ಅನುಮತಿ ಇಲ್ಲದ ಜಾಗದಲ್ಲಿ ಮದ್ಯೆ ಸೇವನೆಗೆ ಅವಕಾಶದಿಂದ ಅತ್ಯಾಚಾರದಂತಹ ಕೃತ್ಯ – ಹೆಚ್ ಡಿ ಕುಮಾರಸ್ವಾಮಿ
ಅನುಮತಿ ಇಲ್ಲದ ಜಾಗದಲ್ಲಿ ಮದ್ಯೆ ಸೇವನೆಗೆ ಅವಕಾಶದಿಂದ ಅತ್ಯಾಚಾರದಂತಹ ಕೃತ್ಯ – ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು: ಆಂಧ್ರಪ್ರದೇಶದಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ತೆಗೆದುಕೊಂಡ ಕ್ರಮವನ್ನೇ ನಮ್ಮ ಸರ್ಕಾರ ತೆಗೆದುಕೊಳ್ಳಬೇಕು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಿಸಿದರು.
ಹೈದ್ರಾಬಾದ್ ನ ವೈದ್ಯೆ ಪ್ರಿಯಾಂಕ ರೆಡ್ಡಿ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಹತ್ಯೆಗೈಯಲಾಗಿತ್ತು. ಆಗ ಅಲ್ಲಿನ ಪೊಲೀಸ್ ಇಲಾಖೆ ಆರೋಪಿತರನ್ನು ಎನ್ ಕೌಂಟರ್ ಮಾಡಿತ್ತು. ಈ ಪ್ರಕರಣವನ್ನು ಪರೋಕ್ಷವಾಗಿ ಉಲ್ಲೇಖಿಸಿದ ಕುಮಾರಸ್ವಾಮಿ ಅವರು ಅದೇ ಮಾದರಿಯಲ್ಲಿ ಕಠಿಣ ಶಿಕ್ಷೆ ಅತ್ಯಾಚಾರ ನಡೆಸಿದ ಆರೋಪಿಗಳಿಗೆ ಆಗಬೇಕೆಂದು ಸುದ್ದಿಗಾರರೊಂದಿಗೆ ಮಾತನಾಡಿದ ವೇಳೆ ಆಗ್ರಹಿಸಿದರು.
ನಮ್ಮ ದೇಶದಲ್ಲಿ ಕಠಿಣ ಕಾನೂನು ಜಾರಿಗೆ ತರದ ಹೊರತು ಇಂತಹ ಘಟನೆಗಳು ಯಾವುದೇ ಎಗ್ಗಿಲ್ಲದೇ ಸಾಗುತ್ತಿರುತ್ತವೆ. ಅತ್ಯಾಚಾರಿಗಳು ಎರಡು ದಿನ ಜೈಲಿಗೆ ಹೋದರೆ ಮೂರನೇ ದಿನಕ್ಕೆ ಜಾಮೀನಿನಲ್ಲಿ ಹೊರಬಂದಿರುತ್ತಾರೆ. ಅವರಿಗೆ ಇಷ್ಟೆ ಕಾನೂನು ಎಂಬಂತಾಗಿದೆ. ಹೈದ್ರಾಬಾದ್ ನಲ್ಲಿ ಅತ್ಯಾಚಾರ ನಡೆಸಿದವರಿಗೆ ಏನಾಯಿತು ಎಂಬುದು ಇಲ್ಲಿ ಸ್ಮರಿಸಬೇಕಿದೆ. ಅದೇ ಮಾದರಿಯ ಶಿಕ್ಷೆ ಅಗತ್ಯವಿದೆ. ಆಗ ಮಹಾತ್ಮ ಗಾಂಧೀಜಿ ಅವರು ಕಂಡ ಕನಸು ನನಸಾಗಲಿದೆ ಎಂದರು.
ಸರ್ಕಾರ ಪ್ರವೇಶಕ್ಕೂ ಅನುಮತಿ ಇಲ್ಲದ ಜಾಗದಲ್ಲಿ ಮದ್ಯೆ ಸೇವನೆಗೆ ಅವಕಾಶ ನೀಡಿದ್ದೇ ಅತ್ಯಾಚಾರದಂತಹ ಅನಾಗರೀಕ ಘಟನೆ ನಡೆಯಲು ಕಾರಣವಾಗಿದೆ. ಸರ್ಕಾರ ತನ್ನಲ್ಲಿರುವ ಲೋಪ ದೋಷಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಚಾಟಿ ಬೀಸಿದರು.