ಅಪಘಾತ ಪರಿಹಾರ ಪಾವತಿಸದ ಹಿನ್ನೆಲೆ ಕೆ ಎಸ್ ಆರ್ ಟಿ ಸಿ ಬಸ್ ಸೀಜ್ ಮಾಡಿದ ಕೋರ್ಟ್ ಅಮೀನರು
ದಾವಣಗೆರೆ: ಅಪಘಾತ ಪರಿಹಾರ ಪಾವತಿ ಮಾಡುವ ವೈಫಲ್ಯದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಕೆಎಸ್‌ಆರ್‌ಟಿಸಿ ಬಸ್‌ನ್ನು ಹುಬ್ಬಳ್ಳಿ ವಿಭಾಗದ ಅಧಿಕಾರಿಗಳು ಮತ್ತು ಕೋರ್ಟ್ ಅಮೀನರು ಸೀಜ್ ಮಾಡಿರುವ ಘಟನೆ ಹರಿಹರದಲ್ಲಿ ನಡೆದಿದೆ.
ಕೋರ್ಟ್ ಅಮೀನರಾದ ಬಸಪ್ಪ, ಮನೋಹರ, ಓಂಕಾರಪ್ಪ, ಶ್ರೀನಿವಾಸ್ ಅವರು ಹರಿಹರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಹುಬ್ಬಳ್ಳಿ ವಿಭಾಗದ ಕೆಎ-63 / ಎಫ್-0082 ಬಸ್ಸನ್ನು ಸೀಜ್ ಮಾಡಿ, ಜಪ್ತು ಮಾಡಿದ ಬಸ್ಸನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಘಟನೆ ಹಿನ್ನೆಲೆ: 2017ರ ಸೆಪ್ಟಂಬರ್ 13 ರಂದು ಹರಿಹರ ತಾಲ್ಲೂಕಿನ ರಾಜನಹಳ್ಳಿ ಕ್ರಾಸ್ ಬಳಿ ಬೈಕ್ ಹಾಗೂ ಕೆಎಸ್ಸಾರ್ಟಿಸಿ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿತ್ತು. ಹೊಸಳ್ಳಿ ಗ್ರಾಮ ನಿವಾಸಿ ಮಂಜುನಾಥ (26), ಬಸವರಾಜ್ (28) ಮೃತಪಟ್ಟಿದ್ದರು.
ಮಂಜುನಾಥ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದರು. ಬಸವರಾಜ್ ಕೃಷಿಕರಾಗಿದ್ದರು. ಮೃತ ಮಂಜುನಾಥ್ ತಂದೆ ಚಂದ್ರಪ್ಪ ಪರಿಹಾರ ಕೋರಿ ಪ್ರಕರಣ ದಾಖಲಿಸಿದ್ದರು. ಅದರಂತೆ ಹರಿಹರದ ನ್ಯಾಯಾಲಯಲ್ಲಿ 18.17 ಲಕ್ಷ ರೂ., ಪರಿಹಾರ ನೀಡಲು ಆದೇಶಿತ್ತು.
ಆದರೆ, ಚಂದ್ರಪ್ಪ ಹೆಚ್ಚುವರಿ ಪರಿಹಾರಕ್ಕಾಗಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಉಚ್ಛ ನ್ಯಾಯಾಲಯವು ಶೇ. 6ರಷ್ಟು ಬಡ್ಡಿಯೊಂದಿಗೆ 47.84 ಲಕ್ಷ ಪರಿಹಾರ ನೀಡಲು ಆದೇಶಿಸಿದ್ದು, ಕೆಎಸ್ಸಾರ್ಟಿಸಿ ಹುಬ್ಬಳ್ಳಿ ವಿಭಾಗದ ಅಧಿಕಾರಿಗಳು ನ್ಯಾಯಾಲಯದ ಆದೇಶದಂತೆ ಕೆಎಸ್ಸಾರ್ಟಿಸಿ ಬಸ್‌ನ್ನು ಇಂದು ಜಪ್ತು ಪಡಿಸಿಕೊಂಡಿದ್ದರು.
ಸಂತ್ರಸ್ತರ ಪರ ವಕೀಲ ಕಿತ್ತೂರು ಶೇಖ್ ಇಬ್ರಾಹಿಂ ವಾದ ಮಂಡಿಸಿದ್ದರು.