ಅವಧಿಗೆ ಮೊದಲೇ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ?

ಬೆಂಗಳೂರು : ರಾಜ್ಯದ ರಾಜಕೀಯ ಪಕ್ಷಗಳು 2023ರ ವಿಧಾನಸಭೆ ಚುನಾವಣೆ ಸಿದ್ಧತೆ ಆರಂಭಿಸಿವೆ ಎನ್ನಲಾಗಿದ್ದು, ಅವಧಿಗೆ ಮೊದಲೇ ರಾಜ್ಯದಲ್ಲಿ ಚುನಾವಣೆ ನಡೆಯಲಿದೆಯೇ? ಎಂಬ ಪ್ರಶ್ನೆ ಈಗ ಎದ್ದಿದೆ. ಸ್ವತಃ ಬಿಜೆಪಿಯೇ ಅವಧಿ ಪೂರ್ವ ಚುನಾವಣೆ ನಡೆಸುವ ಉತ್ಸಾಹದಲ್ಲಿದೆ. ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ ಮತ್ತು ಗೋವಾ ರಾಜ್ಯಗಳ ವಿಧಾನಸಭೆ ಚುನಾವಣೆ ಸದ್ಯ ನಡೆಯುತ್ತಿದೆ. ಒಂದು ವೇಳೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಅವಧಿಗೆ ಮೊದಲೇ ಚುನಾವಣೆ ನಡೆಯುವುದು ಬಹುತೇಕ ಖಚಿತ ಎನ್ನಲಾಗಿದೆ.
ಹೌದು ದೆಹಲಿಯಲ್ಲಿರುವ ಪಕ್ಷದ ನಾಯಕರು ಕರ್ನಾಟಕದಲ್ಲಿ ಅವಧಿಗೂ ಮೊದಲೇ ಚುನಾವಣೆ ನಡೆಸುವ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ. ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ 5 ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. 2022ರ ಅಂತ್ಯದಲ್ಲಿ ಗುಜರಾತ್, ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ರಾಜ್ಯಗಳ ಜೊತೆಗೆ ಕರ್ನಾಟಕಕ್ಕೆ ಸಹ ಚುನಾವಣೆ ನಡೆಸಿದರೆ ಒಟ್ಟಿಗೆ ಗೆಲುವು ಸಾಧಿಸಬಹುದು ಎಂಬುದು ಪಕ್ಷದ ನಾಯಕರ ಲೆಕ್ಕಾಚಾರವಾಗಿದೆ. 2018ರಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ಈಗಿನ ವಿಧಾನಸಭೆಯ ಅವಧಿ ಮೇ 24, 2023ರ ತನಕ ಇದೆ. ಆದರೆ ಗುಜರಾತ್ ರಾಜ್ಯದ ಜೊತೆ 2022ರ ಡಿಸೆಂಬರ್‌ನಲ್ಲೇ ಅಂದರೆ ವಿಧಾನಸಭೆ ಅವಧಿ ಪೂರ್ಣಗೊಳ್ಳುವ ಸುಮಾರು 6 ತಿಂಗಳ ಮೊದಲೇ ರಾಜ್ಯದಲ್ಲಿ ಚುನಾವಣೆ ನಡೆಸುವ ಕುರಿತು ಬಿಜೆಪಿ ನಾಯಕರು ಚಿಂತನೆ ನಡೆಸುತ್ತಿದ್ದಾರೆ.
ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದು, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ. ಉತ್ತರ ಪ್ರದೇಶ ಚುನಾವಣೆ 403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಈಗಾಗಲೇ 5 ಹಂತದ ಮತದಾನ ಪೂರ್ಣಗೊಂಡಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 202 ಆಗಿದೆ. ಮಾರ್ಚ್ 7ರಂದು ಅಂತಿಮ ಹಂತದ ಮತದಾನ ನಡೆಯುತ್ತಿದೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ. ಒಂದು ವೇಳೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆಗೊಂಡರೆ ರಾಜ್ಯದಲ್ಲಿ ಅವಧಿಗೆ ಮೊದಲೇ ಚುನಾವಣೆ ನಡೆಯಲಿದೆ.
ರಾಜ್ಯದಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳು ನಡೆಯಬೇಕು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳು ಸಹ ಬಾಕಿ ಇದೆ. ಈ ಚುನಾವಣೆಗಳನ್ನು ಮುಗಿಸಿ ವಿಧಾನಸಭೆ ಚುನಾವಣೆಯತ್ತ ಪಕ್ಷಗಳು ಗಮನಹರಿಸಬೇಕಿದೆ. ಒಂದು ವೇಳೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಾರದಿದ್ದರೆ ನಿಗದಿಯಂತೆ 2023ರ ಏಪ್ರಿಲ್, ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಪ್ರತಿಪಕ್ಷ ಕಾಂಗ್ರೆಸ್ ಪ್ರಕಾರ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಅಲ್ಲದೇ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ರಾಜೀನಾಮೆ ಕೊಡಿಸಿ, ಬಸವರಾಜ ಬೊಮ್ಮಾಯಿಯನ್ನು ಮುಖ್ಯಮಂತ್ರಿ ಮಾಡಲಾಗಿದೆ. ಹಿಜಾಬ್ ಸೇರಿದಂತೆ ವಿವಿಧ ವಿಚಾರಗಳು ರಾಜ್ಯದಲ್ಲಿ ಹಿಂದುತ್ವದ ಅಜೆಂಡಾವನ್ನು ಗಟ್ಟಿಗೊಳಿಸುತ್ತಿವೆ. ಇಂತಹ ಸಂದರ್ಭದಲ್ಲಿಯೇ ಚುನಾವಣೆಗಳನ್ನು ನಡೆಸಿದರೆ ಪಕ್ಷಕ್ಕೆ ಲಾಭವಾಗುತ್ತದೆ ಎಂಬುದು ವರಿಷ್ಠ ನಾಯಕರ ಲೆಕ್ಕಾಚಾರವಾಗಿದೆ.
ಹೊಸ ಮುಖಗಳಿಗೆ ಆದ್ಯತೆ :
ಯಾವುದೇ ರಾಜ್ಯಗಳ ಚುನಾವಣೆ ನಡೆಯಲಿ ಬಿಜೆಪಿ ಈಗ ಹೊಸ ಮುಖಗಳನ್ನು ಪರಿಚಯಿಸುತ್ತಿದೆ. ಆ ಮೂಲಕ ಭವಿಷ್ಯದಲ್ಲಿ ಪಕ್ಷ ಸಂಘಟನೆಯತ್ತ ಗಮನಹರಿಸಿದೆ. ಕರ್ನಾಟಕದಲ್ಲಿಯೂ ಚುನಾವಣೆ ನಡೆದರೆ ಸುಮಾರು 50 ಹೊಸ ಮುಖಗಳಿಗೆ ಟಿಕೆಟ್ ನೀಡುವ ನಿರೀಕ್ಷೆ ಇದೆ. ಚುನಾವಣೆಗಾಗಿ ಬಿಜೆಪಿ ಈಗಿನಿಂದಲೇ ತಂತ್ರವನ್ನು ರೂಪಿಸುತ್ತಿದೆ.

ರಾಜ್ಯದ ಪ್ರತಿಪಕ್ಷಗಳು ಸಕ್ರಿಯ :
ರಾಜ್ಯದ ಆಡಳಿತ ಪಕ್ಷ ಬಿಜೆಪಿ ಮಾತ್ರವಲ್ಲ. ಪ್ರತಿಪಕ್ಷಗಳು ಸಹ ಚುನಾವಣೆಗೆ ಸಿದ್ಧತೆ ನಡೆಸುತ್ತಿವೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮೂಲಕ ಚುನಾವಣೆಗೆ ಸಜ್ಜಾಗುತ್ತಿದೆ. ಮತ್ತೊಂದು ಕಡೆ ಜೆಡಿಎಸ್ ಪಕ್ಷ ಶಾಸಕರಿಗೆ, ಪದಾಧಿಕಾರಿಗಳಿಗೆ ಕಾರ್ಯಾಗಾರವನ್ನು ಮಾಡುತ್ತಿದೆ. ಚುನಾವಣೆಗೆ ಒಂದು ವರ್ಷ ಮೊದಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡಲು ಸಿದ್ಧತೆ ನಡೆಸಿದೆ ಎಂಬ ಮಾತುಗಳು ಬಲ್ಲಮೂಲಗಳಿಂದ ಕೇಳಿಬರುತ್ತಿವೆ.

Leave a Reply

Your email address will not be published. Required fields are marked *

error: Content is protected !!