ಅಷ್ಟಾಂಗ ಯೋಗಿಗಳಾಗಿ ಜೀವನ ಪರ್ಯಂತ ನಿರೋಗಿಗಳಾಗಿ: ಯೋಗಾಚಾರ್ಯ ಪರುಶರಾಮ್ ಕರೆ
ದಾವಣಗೆರೆ : ಯೋಗ, ನಿಯಮ, ಆಸನ, ಪ್ರಾಣಾಯಾಮ, ಪ್ರಥ್ಯಾಹಾರ, ಧಾರಣ್ಯ, ಧ್ಯಾನ ಮತ್ತು ಸಮಾಧಿ ಇಂತಹ ಅಷ್ಟ ಯೋಗಗಳನ್ನು ಸಿದ್ದಿಸಿಕೊಳ್ಳುವ ಮೂಲಕ ಅಷ್ಟಾಂಗ ಯೋಗಿಗಳಾಗಿ ಜೀವನ ಪರ್ಯಂತ ನಿರೋಗಿಗಳಾಗಿ ಎಂದು ಯೋಗಾಚಾರ್ಯ, ಯೋಗಗುರು, ಎಸ್ ಎ ಎಸ್ ಎಸ್ ಯೋಗ ಫೆಡರೇಶನ್ ನ ಪ್ರಧಾನ ಕಾರ್ಯದರ್ಶಿ ಎನ್. ಪರುಶರಾಮ್ ಕರೆ ನೀಡಿದರು.
ಶುಕ್ರವಾರ ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿ ಬರುವ ಬಿಐಇಟಿ ಕಾಲೇಜು ರಸ್ತೆಯಲ್ಲಿನ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ಶಬರಿಮಲ್ಯೆ ಸೇವಾ ಸಮಿತಿ ಯೋಗಾ ಫೆಡರೇಷನ್ ವತಿಯಿಂದ ಆಯೋಜಿಸಲಾಗಿದ್ದ ಬಹುಮಾನ ವಿತರಣಾ, ಯೋಗಾ ಛಾಂಪಿಯನ್ ಶಿಪ್ ನಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲು ಆಯೋಜಿಸಲಾಗಿದ್ದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯೋಗವು ಪರಿಶುದ್ಧ ವಿಜ್ಞಾನ ಶಾಸ್ತ್ರ, ಅದಕ್ಕೆ ಯಾವುದೇ ಜಾತಿ, ಮತ, ಬೇಧವಿಲ್ಲ. ಮಾತ್ರವಲ್ಲ ವಯಸ್ಸಿನ ಮಿತಿಯೂ ಇಲ್ಲ. ಕಾರಣ ಎಲ್ಲಾ ವಯೋಮಾನದವರು ಯಾವುದೇ ಹಿಂಜರಿಕೆ ಇಲ್ಲದೆ ಯೋಗ ಕಲಿತು ಜೀವನದಲ್ಲಿ ಸಾಧನೆ ಮಾಡಬಹುದು ಎಂದರು .
ಯಾವುದೇ ವಯಸ್ಸಿನ ಮಿತಿಯಿಲ್ಲದೆ ನಿರಂತರವಾಗಿ ಯೋಗಗಳನ್ನು ಅಳವಡಿಸಿಕೊಂಡರೆ ಮಾನಸಿಕ ನೆಮ್ಮದಿ ದೈಹಿಕ ದೃಢತೆ ದೊರೆಯಲಿದೆ. ಅಲ್ಲದೆ ಎಲ್ಲಾ ಹಂತಗಳಲ್ಲೂ ನಾವು ಯಶಸ್ಸು ಸಾಧಿಸಬೇಕು ಎಂದು ಹೇಳಿದರು .
ಬಹುಮಾನ ವಿತರಿಸಿದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ನಿವೃತ್ತ ಅಧಿಕಾರಿ ಮಲ್ಲಿಕಾರ್ಜುನ್ ಹೊಸೂರು ಮಾತನಾಡಿ, ಯೋಗದಲ್ಲಿ ಬರುವ ಓಂಕಾರ ಮಾನವನಲ್ಲಿ ಕಂಪನ ಸೃಷ್ಟಿಸುತ್ತದೆ. ಇದರಿಂದಾಗಿ ಉಸಿರಾಟದ ಪ್ರಕ್ರಿಯೆ ಸರಾಗವಾಗಿ ಆಗಿ ಮಾನವನ ದೇಹ ಸ್ವಚ್ಛಗೊಳ್ಳುತ್ತದೆ. ಹೀಗಾಗಿ ಯೋಗ ಮಾಡುವ ವ್ಯಕ್ತಿಗೆ ಯಾವುದೇ ರೋಗಗಳು ಬರುವುದಿಲ್ಲ ಎಂದು ಹೇಳಿದರು .
ಫೆಡರೇಶನ್ ನ ಅಧ್ಯಕ್ಷ ಎಂ ರುದ್ರಪ್ಪ ಮಾತನಾಡಿ, ಯೋಗದಿಂದಾಗಿ ನಾವು ದೈನಂದಿನವಾಗಿ ಲವಲವಿಕೆಯಿಂದ ಇರುತ್ತವೆ. ಅಲ್ಲದೆ ಮನಸ್ಸಿನಲ್ಲಿ ಹುರುಪು ಮೂಡುತ್ತದೆ. ನಿರಂತರವಾಗಿ ಯೋಗಾಭ್ಯಾಸ ಮಾಡುವುದರಿಂದ ಎಲ್ಲ ಸಮಸ್ಯೆಗಳು ದೂರವಾಗುತ್ತವೆ. ಕಾರಣ ಇಂದಿನಿಂದಲೇ ಜನರು ಯೋಗಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ವೇಳೆ ಯೋಗಾ ಫೆಡರೇಷನ್ ನ ಎಂ.ಎನ್. ಗೋಪಾಲ್ ರಾವ್, ಎಸ್.ರಾಜಶೇಖರ್, ಅಜೇಯ್, ಪತ್ರಕರ್ತ ಎಂ.ವೈ. ಸತೀಶ್, ರಾಘವೇಂದ್ರ ಚವ್ಹಾಣ್, ಸಾವಿತ್ರಮ್ಮ, ಗೀತಾ, ವೀರೇಶ್ ಸೇರಿದಂತೆ ಇತರರು ಇದ್ದರು .
ಇದೇ ವೇಳೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಐದನೇ ರಾಷ್ಟ್ರೀಯ ಮುಕ್ತ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ 6 ಬಂಗಾರದ ಪದಕಗಳು ಮತ್ತು 2 ಬೆಳ್ಳಿ ಪದಕಗಳನ್ನು ಪಡೆದ ವಿಜೇತರಿಗೆ ಸನ್ಮಾನ ಮಾಡಲಾಯಿತು.