ರೈತರ ಮೇಲಿನ ಹಲ್ಲೆ ಖಂಡನೀಯ: ಟಿ.ಅಸ್ಗರ್

ದಾವಣಗೆರೆ: ಕಬ್ಬಿಗೆ ನ್ಯಾಯೋಚಿತ ಹಾಗೂ ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಸೇರಿದಂತೆ ವಿವಿಧ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಆಗ್ರಹಿಸಿ ಮಂಡ್ಯದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಯನ್ನು ಬಲವಂತವಾಗಿ ಹತ್ತಿಕ್ಕಿದ ಪೊಲೀಸರ ಕ್ರಮ ಖಂಡನೀಯ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಟಿ. ಅಸ್ಗರ್ ಕಿಡಿಕಾರಿದ್ದಾರೆ.
ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ೫೨ ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ರಾಜ್ಯ ಬಿಜೆಪಿ ಸರ್ಕಾರ ಸ್ಪಂದಿಸಿಲ್ಲ. ಈಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದಾಗ ಸರ್ಕಾರಕ್ಕೆ ಮುಜುಗರವಾಗುತ್ತೆ ಎಂಬ ಕಾರಣಕ್ಕೆ ಪೊಲೀಸರನ್ನು ಬಳಸಿಕೊಂಡು ಹೋರಾಟವನ್ನು ಹತ್ತಿಕ್ಕಲಾಗಿದೆ. ರೈತರ ಟೆಂಟ್‌ಗಳನ್ನು ಕಿತ್ತೆಸೆದು, ಅವರನ್ನು ಬಂಧಿಸುವ ಮೂಲಕ ಪೊಲೀಸರು ರೈತರ ಮೇಲೆ ದೌರ್ಜನ್ಯ ಎಸಗಿರುವುದು ಖಂಡನೀಯ ಎಂದಿದ್ದಾರೆ.
ಪ್ರತಿಭಟಿಸುವ ಹಕ್ಕನ್ನು ಕಸಿಯುವುದು ಸರಿಯಲ್ಲ. ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ರೈತರ ಬಗ್ಗೆ ಕನಿಷ್ಠ ಕಾಳಜಿ ಇದ್ದರೆ ಪ್ರತಿಭಟನಾನಿರತ ರೈತರ ಜೊತೆ ಮಾತುಕತೆ ನಡೆಸಬೇಕಿತ್ತು. ಆದರೆ ಚುನಾವಣಾ ತಯಾರಿ, ಸಂಪುಟ ವಿಸ್ತರಣೆ ಕಸರತ್ತಿನಲ್ಲೇ ಮಗ್ನವಾಗಿರುವ ಮುಖ್ಯಮಂತ್ರಿಗೆ ರೈತರ ಹಿತರಕ್ಷಣೆ ಬೇಕಾಗಿಲ್ಲ. ಸಿಎಂ ಕೇವಲ ಬಿಜೆಪಿ ಹೈಕಮಾಂಡ್ ಮೆಚ್ಚಿಸಲು ಅಧಿಕಾರ ನಡೆಸುತ್ತಿದ್ದು ಜನಸಾಮಾನ್ಯರ ಹಿತ ನಿರ್ಲಕ್ಷಿಸಲಾಗುತ್ತಿದೆ. ಆದ್ದರಿಂದ ದೇಶಕ್ಕೆ ಅನ್ನ ನೀಡುವ ರೈತರ ಮೇಲೆ ದೌರ್ಜನ್ಯ ನಡೆಸುವ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಮಾಡಲು ನಾಡಿನ ಜನರು ಒಗ್ಗೂಡ ಬೇಕಾಗಿದೆ ಎಂದು ಕರೆ ನೀಡಿದ್ದಾರೆ.