ಅಕ್ಟೋಬರ್ 8 ರಂದು ಬಸವಾದಿ ಶರಣರ ತತ್ವ ಸಾರುವ ಕಿರುಚಿತ್ರದ ಪೋಸ್ಟರ್ ಬಿಡುಗಡೆ

ದಾವಣಗೆರೆ: ಬಸವಾದಿ ಶರಣರ ತತ್ವಗಳನ್ನು ಯುವ ಜನಾಂಗಕ್ಕೆ ತಲುಪಿಸುವ ಉದ್ದೇಶದಿಂದ ನಿರ್ಮಿಸುತ್ತಿರುವ ಉದಕದೊಳಗಿನ ಕಿಚ್ಚು.. ಕಿರುಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭ ಅ. 8 ರಂದು ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ಡಿಂಗ್ರಿ ನರೇಶ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪ್ರಸ್ತುತ ವಾತಾವರಣದಲ್ಲಿ ಯುವ ಜನಾಂಗ ಬಸವಾದಿ ಶರಣರ ತತ್ವಗಳನ್ನುಮರೆತಿದೆ. ಇದೇ ರೀತಿ ಮುಂದುವರೆದರೆ ಮತ್ತೊಂದು ತಾಲಿಬಾನ್ ಸಂಸ್ಕೃತಿಯ ಕಾಣಬಹುದು ಎಂಬ ಆತಂಕದ ವಾತಾವರಣ ಇದೆ. ಬಸವಾದಿ ಶರಣರ ತತ್ವ ತಲುಪಿಸುವ ನಿಟ್ಟಿನಲ್ಲಿ ಈ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಒಂದು ಗಂಟೆ ಹದಿನೈದು ನಿಮಿಷದ ಚಿತ್ರದಲ್ಲಿ ಮಂಡ್ಯ ರಮೇಶ್ ಪ್ರಮುಖ ಪಾತ್ರ ವಹಿಸಲಿದ್ದಾರೆ.‌ ಕಿರುಚಿತ್ರ ವನ್ನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಿಲ್ಲ. ಶಾಲಾ- ಕಾಲೇಜುಗಳಿಗೆ ನಾವೇ ಚಿತ್ರತಂಡದವರು ತೆರಳಿ ಚಿತ್ರ ಪ್ರದರ್ಶನ ಮಾಡುತ್ತೇವೆ ಎಂದು ತಿಳಿಸಿದರು.

ಕಿರುಚಿತ್ರದ ಕಥೆಯನ್ನು ಸಿದ್ದಪಡಿಸಿದ ನಂತರ ನಾಡಿನ ಬಹುತೇಕ ಎಲ್ಲ ಮಠಾಧೀಶರರಿಗೆ ತೋರಿಸಿ ಸಲಹೆ ಸೂಚನೆಗಳನ್ನು ಪಡೆಯಲಾಗಿದೆ. ಪ್ರತಿ ಹಂತ ಶಬ್ದ ಗಳ ಅಕ್ಷರ ತಿದ್ದಿದವರು ಪಂಡಿತಾರಾಧ್ಯರು. ಅವರ ಮಾರ್ಗದರ್ಶನದಲ್ಲಿ ಕಥೆ ರೂಪುಗೊಂಡಿದೆ. 12 ಮತ್ತು 21 ನೇ ಶತಮಾನದ ಸಂಪರ್ಕಿಸುವ ಸಾಮಾಜಿಕ ಕಳಕಳಿಯೊಂದಿಗೆ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಚಿತ್ರದ ನಿರ್ಮಾಪಕ ನಂದೀಶ್ ಕುಮಾರ್ ಮಾತನಾಡಿ, ಚಲನಚಿತ್ರ ಸಮಾಜದ ಕನ್ನಡಿ ಇದ್ದಂತೆ. ಒಳ್ಳೆಯ ವಿಚಾರಗಳನ್ನು ಜನರಿಗೆ ತಿಳಿಸಬೇಕು. ಬಸವೇಶ್ವರರ ಜೀವನದ ಆಯ್ದ ಪ್ರಮುಖ ಘಟನೆ, ವಚನಗಳ ಜನರಿಗೆ ತಲುಪಿಸುವ ಉದ್ದೇಶದಿಂದ ಚಿತ್ರ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು.ಸಹ ನಿರ್ದೇಶಕ ಸೂರಿ ಅಳಚುಕ್ಕಿ, ಪಿ. ರವಿ ಸುದ್ದಿಗೋಷ್ಠಿಯಲ್ಲಿದ್ದರು.

ಶುಕ್ರವಾರ ಬೆಳಗ್ಗೆ 10.30ಕ್ಕೆ ನಡೆಯುವ ಸಮಾರಂಭದಲ್ಲಿ ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಸದ ಡಾ. ಜಿ.ಎಂ. ಸಿದ್ದೇಶ್ವರ, ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್‌. ಮಲ್ಲಿಕಾರ್ಜುನ್, ಬಿಜೆಪಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ನಾಗರಾಜ್ ಲೋಕಿಕೆರೆ, ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ. ಕಪ್ಪಣ್ಣ, ಮಂಡ್ಯ ರಮೇಶ್, ಡಾ. ಎಂ.ಜಿ. ಈಶ್ವರಪ್ಪ, ಡಾ. ನಾ. ಲೋಕೇಶ್ ಒಡೆಯರ್, ಅಂಬಣ್ಣ ಆರೋಲಿಕರ್, ರವೀಂದ್ರ ಜಲ್ದಾರ್, ಸಾಯಿ ಕಿರಣ್ ಆದೋನಿ, ಪ್ರಕಾಶ್ ಅಂಗಡಿ ಇತರರು ಭಾಗವಹಿಸುವರು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!