ಬೀದಿ ಬದಿಯ ವ್ಯಾಪಾರಸ್ಥರಿಗೆ ಕಲ್ಯಾಣ ಮಂಡಳಿ ರಚಿಸಲು ಫುಟ್‌ಪಾತ್ ವ್ಯಾಪಾರಸ್ಥರ ಒತ್ತಾಯ
ದಾವಣಗೆರೆ: ಸಂಕಷ್ಟದಲ್ಲಿ ಬದುಕು ನಡೆಸುತ್ತಿರುವ ಬೀದಿ ಬದಿಯ ವ್ಯಾಪಾರಸ್ಥರಿಗೆ ಕಲ್ಯಾಣ ಮಂಡಳಿ ರಚಿಸುವ ಮೂಲಕ ಸೌಲಭ್ಯಗಳನ್ನು ಕಲ್ಪಿಸಿ ಕೊಡುವಂತೆ ದಾವಣಗೆರೆ ಕೆ.ಆರ್. ಮಾರ್ಕೆಟ್ ಫುಟ್‌ಪಾತ್ ಚಿಲ್ಲರೆ ತರಕಾರಿ ವ್ಯಾಪಾರಸ್ಥರ ಸಂಘ ಒತ್ತಾಯಿಸಿದೆ.
ಸಂಘದ ಕಾರ್ಯದರ್ಶಿ ಇಸ್ಮಾಯಿಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿಯೊಬ್ಬ ಬೀದಿ ಬದಿಯ ವ್ಯಾಪಾರಿಯು ವರ್ಷಕ್ಕೆ 12 ಸಾವಿರದವರೆಗೆ ಜಕಾತಿ ಪಾವತಿಸುತ್ತಿದ್ದಾರೆ. ದಾವಣಗೆರೆ ನಗರ ವ್ಯಾಪ್ತಿಯಲ್ಲಿಯೇ ಸುಮಾರು 10 ಸಾವಿರಕ್ಕೂ ಅಧಿಕ ಬೀದಿ ಬದಿಯ ವ್ಯಾಪಾರಸ್ಥರಿದ್ದಾರೆ. ಆದರೆ, ಸರ್ಕಾರ ಮಾತ್ರ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬೀದಿ ಬದಿಯ ವ್ಯಾಪಾರಿಗಳಿಂದ ಜಕಾತಿ ಹೆಸರಲ್ಲಿ ಹಣ ಸುಲಿಗೆ ಮಾಡಲಾಗುತ್ತಿದೆ. ಜಕಾತಿ ಟೆಂಡರ್‌ನ್ನು ಕರೆಯುವಾಗ ಜಕಾತಿ ಗುತ್ತಿಗೆದಾರರು, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಮಹಾಪೌರರು ಮತ್ತು ಬೀದಿ ಬದಿ ವ್ಯಾಪಾರಸ್ಥ ಮುಖಂಡರ ನೇತೃತ್ವದಲ್ಲಿ ಸಭೆ ನಡೆಸಿ ಟೆಂಡರ್ ಕೊಡಬೇಕೆಂದು ಒತ್ತಾಯಿಸಿದರು.
ಜಕಾತಿ ರಸೀದಿಯನ್ನು ಅಂದೇ ನೀಡಬೇಕು. ಅದರಲ್ಲಿ ಪಾಲಿಕೆಯ ಮೊಹರು ಇರಬೇಕು. ಕಸ ವಿಲೇವಾರಿಯನ್ನು ಉಚಿತವಾಗಿ ನೀಡಬೇಕು, ಕುಡಿಯುವ ನೀರು ಹಾಗೂ ನೆರಳಿನ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಂಬುಜಮ್ಮ, ರವಿಕುಮಾರ್, ಶಿವಕುಮಾರ್, ರಾಮಣ್ಣ, ಹರೀಶ್ ಇದ್ದರು.