ಬೆಂಬಲ ಬೆಲೆಯಲ್ಲಿ ರಾಗಿ, ಶೇಂಗಾ, ಖರೀದಿಗೆ ನೊಂದಣಿ ಪ್ರಾರಂಭ: ಮಧ್ಯವರ್ತಿಗಳ ಹಾವಳಿ ತಡೆಗಟ್ಟಲು ಕ್ರಮ ವಹಿಸುವಂತೆ ಡಿಸಿ ಸೂಚನೆ

DC

ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ಕನಿಷ್ಟ ಬೆಂಬಲ ಯೋಜನೆಯಡಿ ಜಿಲ್ಲೆಯಲ್ಲಿ ರೈತರಿಂದ ರಾಗಿ, ಶೇಂಗಾ ಖರೀದಿಗೆ ನಿರ್ಧರಿಸಲಾಗಿದ್ದು, ಫ್ರೂಟ್ಸ್ ತಂತ್ರಾಂಶದಲ್ಲಿ ನೊಂದಣಿ ಪ್ರಕ್ರಿಯೆ ಆರಂಭವಾಗಿದೆ. ರೈತರಿಂದ ಬೆಳೆ ಖರೀದಿ ಸಂಬಂಧಿಸಿದಂತೆ ಮಧ್ಯವರ್ತಿಗಳ ಹಾವಳಿ ತಡೆಗಟ್ಟಲು ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಹೇಳಿದರು.

ಬೆಂಬಲ ಬೆಲೆ ಯೋಜನೆಯಡಿ ರಾಗಿ ಮತ್ತು ಶೇಂಗಾ ಬೆಳೆ ಖರೀದಿ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದಿರುವ ರಾಗಿ ಮತ್ತು ಶೇಂಗಾ ಬೆಳೆಯನ್ನು ಖರೀದಿಸುವ ಸಲುವಾಗಿ ಸರ್ಕಾರ ಬೆಂಬಲ ಬೆಲೆ ನಿಗದಿಪಡಿಸಿದೆ. ಖರೀದಿಗೆ ಸಂಬಂಧಿಸಿದಂತೆ ಈಗಾಗಲೆ ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಫ್ರೂಟ್ಸ್ ದತ್ತಾಂಶದಿಂದ ರೈತರ ಮಾಹಿತಿ ಪಡೆಯಲಾಗುವುದರಿಂದ, ಬೆಳೆ ಮಾರಾಟ ಮಾಡಬಯಸುವ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ತಪ್ಪದೆ ನೊಂದಣಿ ಮಾಡಿಸಬೇಕು. ನೊಂದಣಿ ಮಾಡಿಸಿದ ರೈತರ ಬೆಳೆಯನ್ನು ಮಾತ್ರ ಬೆಂಬಲ ಬೆಲೆಯಡಿ ಖರೀದಿಸಲಾಗುವುದು.
ರಾಗಿ ಮತ್ತು ಶೇಂಗಾ ಬೆಳೆ ಖರೀದಿ ಸಂಬಂಧ ಈಗಾಗಲೆ ಫ್ರೂಟ್ಸ್ ತಂತ್ರಾಂಶದಲ್ಲಿ ನೊಂದಣಿ ಪ್ರಕ್ರಿಯೆ ಆರಂಭವಾಗಿದೆ ಎಂದರು.

ಗುಣಮಟ್ಟದ ರಾಗಿಗೆ ಪ್ರತಿ ಕ್ವಿಂಟಾಲ್‍ಗೆ ರೂ. 3377 ಗಳ ಬೆಂಬಲ ಬೆಲೆ ಘೋಷಿಸಲಾಗಿದ್ದು, ಪ್ರತಿ ರೈತರಿಂದ ಎಕರೆಗೆ 10 ಕ್ವಿಂಟಾಲ್‍ನಂತೆ, ಗರಿಷ್ಟ 20 ಕ್ವಿಂಟಾಲ್ ರಾಗಿ ಖರೀದಿಗೆ ಅವಕಾಶವಿದೆ. ರಾಗಿ ಬೆಳೆ ತರುವ ರೈತರಿಗೆ ಪ್ರತಿ ಚೀಲಕ್ಕೆ ರೂ. 22 ರೂ. ನೀಡಲಾಗುವುದು. ಮಾರಾಟ ಮಾಡಬಯಸುವ ರೈತರಿಂದ ಈಗಾಗಲೆ ನೊಂದಣಿ ಪ್ರಕ್ರಿಯೆ ಆರಂಭಿಸಲಾಗಿದ್ದು, ಡಿ. 31 ರವರೆಗೂ ನೊಂದಣಿಗೆ ಅವಕಾಶವಿದೆ. ನೊಂದಣಿ ಮಾಡಿಕೊಂಡ ರೈತರ ರಾಗಿಯನ್ನು ಖರೀದಿ ಕೇಂದ್ರಗಳಲ್ಲಿ ಜ. 01 ರಿಂದ ಮಾರ್ಚ್ 31 ರವರೆಗೆ ಮಾತ್ರ ಖರೀದಿಸಲಾಗುವುದು. ರೈತರು ತಾವು ಬೆಳೆದ ಬೆಳೆಯನ್ನು ಮಾತ್ರ ಖರೀದಿ ಕೇಂದ್ರಕ್ಕೆ ತರಬೇಕು.

ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಕಾರ್ಯ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಎಪಿಎಂಸಿ ಆವರಣದಲ್ಲಿ ಜ. 01 ರಿಂದ ಪ್ರಾರಂಭಿಸಲಾಗುವುದು. ಜಿಲ್ಲೆಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತವನ್ನು ಖರೀದಿ ಏಜೆನ್ಸಿಯಾಗಿ ಸರ್ಕಾರ ನಿಗದಿಪಡಿಸಿದೆ. ಪ್ರತಿ ಖರೀದಿ ಕೇಂದ್ರಕ್ಕೆ ಗ್ರೇಡರ್‍ಗಳನ್ನು ನೇಮಿಸಿ, ಕೇಂದ್ರದಲ್ಲಿ ರೈತರಿಗೆ ಕುಡಿಯುವ ನೀರು, ನೆರಳು ಮುಂತಾದ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು. ಮಧ್ಯವರ್ತಿಗಳ ಹಾವಳಿ ತಡೆಗಟ್ಟಲು ಉಪವಿಭಾಗಾಧಿಕಾರಿಗಳು ಹಾಗೂ ಆಯಾ ತಹಸಿಲ್ದಾರರು, ಕೃಷಿ, ಆಹಾರ ಇಲಾಖೆ ಮತ್ತು ಎಪಿಎಂಸಿ ಅಧಿಕಾರಿಗಳು ಖರೀದಿ ಕೇಂದ್ರಗಳಿಗೆ ಆಗಾಗ್ಗೆ ಭೇಟಿ ನೀಡಿ ಪರಿಶೀಲಿಸಿ, ಕ್ರಮ ಕೈಗೊಳ್ಳಬೇಕು. ಸರ್ಕಾರದ ಸೂಚನೆಯಂತೆ ರೈತರಿಗೆ ಖರೀದಿಯಾದ 15 ದಿನಗಳ ಒಳಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ಕ್ರಮ ಆಗಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಎಫ್‍ಎಕ್ಯೂ ಗುಣಮಟ್ಟದ ಶೇಂಗಾ ಬೆಳೆಗೆ ಪ್ರತಿ ಕ್ವಿಂ. ಗೆ ರೂ. 5550 ಗಳ ಬೆಂಬಲ ಬೆಲೆ ಘೋಷಿಸಲಾಗಿದ್ದು, ಪ್ರತಿ ರೈತರಿಂದ ಎಕರೆಗೆ 03 ಕ್ವಿಂಟಾಲ್‍ನಂತೆ, ಗರಿಷ್ಟ 15 ಕ್ವಿಂಟಾಲ್ ಶೇಂಗಾ ಖರೀದಿಗೆ ಅವಕಾಶವಿದೆ. ಜಿಲ್ಲೆಗೆ ಕರ್ನಾಟಕ ಆಹಾರ ಕರ್ನಾಟಕ ಸಹಕಾರಿ ಎಣ್ಣೆಬೀಜ ಬೆಳೆಗಾರರ ಮಹಾ ಮಂಡಳಿ ನಿಯಮಿತ ವನ್ನು (ಕೆಒಎಫ್) ಖರೀದಿ ಏಜೆನ್ಸಿಯಾಗಿ ಸರ್ಕಾರ ನಿಗದಿಪಡಿಸಿದೆ. ಮಾರಾಟ ಮಾಡಬಯಸುವ ರೈತರಿಂದ ಈಗಾಗಲೆ ನೊಂದಣಿ ಪ್ರಕ್ರಿಯೆ ಆರಂಭಿಸಲಾಗಿದ್ದು, ರೈತರ ನೊಂದಣಿ ಪ್ರಕ್ರಿಯೆ ಗಮನಿಸಿ, ಅಗತ್ಯವಿದ್ದರೆ ಜಗಳೂರು ತಾಲ್ಲೂಕಿನಲ್ಲಿ ಮಾತ್ರ ಖರೀದಿ ಕೇಂದ್ರ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಆಹಾರ ಇಲಾಖೆ ಜಂಟಿನಿರ್ದೇಶಕ ಮಂಟೇಸ್ವಾಮಿ ಅವರು, ಬೆಂಬಲ ಬೆಲೆ ಯೋಜನೆಯಡಿ ರಾಗಿ ಮತ್ತು ಶೇಂಗಾ ಖರೀದಿ ಕುರಿತಂತೆ ಸರ್ಕಾರದ ಸೂಚನೆ ಬಗ್ಗೆ ವಿವರವಾದ ವರದಿ ನೀಡಿದರು. ಕಳೆದ ವರ್ಷ ಶೇಂಗಾ ಬೆಳೆಗೆ ಜಗಳೂರು ತಾಲ್ಲೂಕಿನಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಿದರೂ, ಮಾರುಕಟ್ಟೆಯಲ್ಲಿ ಉತ್ತಮ ದರ ಇದ್ದ ಕಾರಣ, ಯಾವುದೇ ರೈತರು ಬೆಂಬಲ ಬೆಲೆಯಲ್ಲಿ ಮಾರಾಟಕ್ಕೆ ಮುಂದಾಗಲಿಲ್ಲ. ಈ ವರ್ಷ ಮುಕ್ತ ಮಾರುಕಟ್ಟೆಯಲ್ಲಿ ಶೇಂಗಾ ಪ್ರತಿ ಕ್ವಿಂಟಾಲ್‍ಗೆ 5650 ರವರೆಗೂ ದರ ಇದೆ. ಬೆಂಬಲ ಬೆಲೆಗೆ ರೈತರ ನೊಂದಣಿ ಪ್ರಕ್ರಿಯೆ ನೋಡಿಕೊಂಡು, ಖರೀದಿ ಕೇಂದ್ರ ಪ್ರಾರಂಭ ಕುರಿತು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಜಂಟಿಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಮಾತನಾಡಿ, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಸುಮಾರು 16000 ಟನ್ ರಾಗಿ, 6000 ಟನ್ ಶೇಂಗಾ, 3000 ಟನ್ ಜೋಳ, 3.31 ಲಕ್ಷ ಟನ್ ಭತ್ತ ಉತ್ಪಾದನೆಯ ಅಂದಾಜು ಮಾಡಲಾಗಿದೆ ಎಂದರು.
ಸಭೆಯಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿರ್ದೇಶಕ ರಾಜು, ಕೆಒಎಫ್ ಜಿಲ್ಲಾ ಅಧಿಕಾರಿ ಹನುಮಂತನಾಯಕ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!