ಬೆಳಗಾವಿ ಉದ್ಯೋಗ ಮೇಳ 1346 ಅಭ್ಯರ್ಥಿಗಳ ಪೈಕಿ 307 ಯುವಜನರ ನೇರ ನೇಮಕಾತಿ
ಬೆಳಗಾವಿ: ಜಿಲ್ಲೆಯ ಕೌಶಲ್ಯಾಭಿವೃದ್ಧಿ ಕಛೇರಿ ವತಿಯಿಂದ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 13 ಖಾಸಗಿ ಕಂಪನಿಗಳು ಭಾಗವಹಿಸಿದ್ದು, 1346 ಯುವಕ-ಯುವತಿಯರು ಪಾಲ್ಗೊಂಡಿದ್ದರು. ಅದರ ಪೈಕಿ 307 ಅಭ್ಯರ್ಥಿಗಳು ನೇರ ಆಯ್ಕೆಯಾಗಿದ್ದಾರೆ.
ಇದೇ ಫೆಬ್ರವರಿ 19 ರ ಶನಿವಾರ ಬೆಳಿಗ್ಗೆ ಇಲ್ಲಿಯ ಸುವರ್ಣಸೌಧದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಬಿ.ಎಡ್, ಡಿಎಡ್ ಹಾಗೂ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗಾಗಿ ನಡೆದ ಉದ್ಯೋಗ ಮೇಳದಲ್ಲಿ 13 ಖಾಸಗಿ ಕಂಪನಿಗಳ ಪೈಕಿ 400 ರಿಂದ 500 ವೇಕೆನ್ಸಿಗಳು ಖಾಲಿ ಇದ್ದು, 10 ಕಂಪನಿಗಳಲ್ಲಿ 307 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇನ್ನೂ 3 ಕಂಪನಿಗಳಲ್ಲಿ 52 ಅಭ್ಯರ್ಥಿಗಳು ಕಿರುಪಟ್ಟಿಗೆ (ಶಾರ್ಟ್ಲೀಸ್ಟ್) ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
ಈ ವೇಳೆ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಬಸವಪ್ರಭು ಹಿರೇಮಠ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೌಶಲ್ಯ ಕೊರತೆ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲು ಕೌಶಲ್ಯಾಭಿವೃದ್ಧಿ ಇಲಾಖೆಯು ಅತೀ ಹೆಚ್ಚು ಶ್ರಮಿಸುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿ ವಿಶೇಷವಾಗಿ ಜೀವನೋಪಾಯ ಪ್ರಚಾರಕ್ಕಾಗಿ ಕೌಶಲ್ಯ ಸ್ವಾಧೀನ ಮತ್ತು ಜ್ಞಾನದ ಅರಿವು (SಂಓಏAಐP) ಯೋಜನೆಯ ನೂತನ ವೆಬ್‌ಸೈಟ್‌ನ್ನು ತೆರೆಯಲಾಗಿದೆ. ಈ ವೆಬ್‌ಸೈಟ್ ಉದ್ಯೋಗದಾತರು ಹಾಗೂ ಉದ್ಯೋಗಾಂಕ್ಷಿಗಳ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ. ಇದರಿಂದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುವುದರೊಂದಿಗೆ ಯುವ ಪೀಳಿಗೆಯ ಬೆಳವಣಿಗೆಗೆ ಉತ್ತಮ ಅವಕಾಶಗಳು ಸಿಗುತ್ತವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭ್ಯಂತರರಾದ ಸುರೇಶ್ ಭೀಮ್ ನಾಯಕ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ಉದ್ಯೋಗಾಧಿಕಾರಿಯಾದ ಜಿ.ಎಸ್.ಕೋರಸಗಾಂವ್ ಜಿಲ್ಲಾ ಸಮಾಲೋಚಕರಾದ ನಾಗರಾಜ್.ವಿ.ಹೆಚ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
===