ಬೆಂಗಳೂರು ವಿವಿ: ಸಂಶೋಧನಾ ವಿದ್ಯಾರ್ಥಿ ಈಶ್ವರ್‌ಗೆ ಅತ್ಯುತ್ತಮ ಲೇಖನದ ‘ಗೌರವ ಪ್ರಶಸ್ತಿ’
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಈಶ್ವರ್‌ಗೆ ಸಂಶೋಧನಾ ವಿಭಾಗದ ಅತ್ಯುತ್ತಮ ಲೇಖನದ ‘ಗೌರವ ಪ್ರಶಸ್ತಿ’ ಸಿಕ್ಕಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಈಶ್ವರ್ ಅವರಿಗೆ ಪ್ರಶಸ್ತಿ ಪ್ತಧಾನ ಮಾಡಲಾಯಿತು.
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿಶೇಷ ಘಟಕದ ಸಹಯೋಗದೊಂದಿಗೆ ಆಯೋಜಿತವಾದ “ಭಾರತದ ಸಮಕಾಲೀನ ಸವಾಲುಗಳು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಚಿಂತನೆಗಳು” ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಗಮನಸೆಳೆಯಿತು. ಈ ವಿಚಾರ ಸಂಕಿರಣದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡುವ (Research Scholar) ಅತ್ಯುತ್ತಮ ಸಂಶೋಧನಾ ಲೇಖನಕ್ಕೆ 2021-2022 ಸಾಲಿನ ಪುರಸ್ಕಾರ ಘೋಷಿಸಲಾಯಿತು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕರೂ ಆದ, ಕೊಪ್ಪಳ ವಿಶ್ವವಿದ್ಯಾಲಯದ ನೂತನ ಕುಲಪತಿ ಡಾ. ಬಿ.ಕೆ.ರವಿ ಅವರ ಮಾರ್ಗದರ್ಶನದಲ್ಲಿ ಪೂರ್ಣಾವಧಿ ಅಧ್ಯಯನ ಮಾಡುತ್ತಿರುವ ಸಂಶೋಧನಾ ವಿದ್ಯಾರ್ಥಿ ಈಶ್ವರ್ ಅವರಿಗೆ ವಿಶ್ವವಿದ್ಯಾಲಯದ ಆಡಳಿತ ವರ್ಗ ಹಾಗೂ ಗಣ್ಯರ ಸಮ್ಮುಖದಲ್ಲಿ ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು.