ಭೋವಿ ಅಭಿವೃದ್ಧಿ ನಿಗಮ: ವಿವಿಧ ಯೋಜನೆಗೆ ಅರ್ಜಿ ಆಹ್ವಾನ
ದಾವಣಗೆರೆ: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವತಿಯಿಂದ ವಿವಿಧ ಯೋಜನೆಯಡಿ ಸಾಲ ಮತ್ತು ಸಹಾಯಧನ ಸೌಲಭ್ಯ ಕಲ್ಪಿಸಲು ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವ್ಯಾಪ್ತಿಗೆ ಬರುವ ಜನಾಂಗದ ಫಲಾಪೇಕ್ಷಿಗಳಿಂದ ಸ್ವಯಂ ಉದ್ಯೋಗ ಯೋಜನೆ, ಐ.ಎಸ್.ಬಿ. ಯೋಜನೆ, ಎಂ.ಸಿ.ಎಫ್. ಪ್ರೇರಣಾ ಯೋಜನೆ, ಗಂಗಾ ಕಲ್ಯಾಣ ಹಾಗೂ ಭೂ ಒಡೆತನ ಯೋಜನೆಯಡಿ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ ಯೋಜನೆಯಡಿ ತರಕಾರಿ, ಹಣ್ಣು ಮಾರಾಟ, ಹಸು, ಎಮ್ಮೆ, ಕುರಿ, ಹಂದಿ, ಮೊಲ ಸಾಕಾಣಿಕೆ ಇತ್ಯಾದಿ ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ಘಟಕ ವೆಚ್ಚ ಗರಿಷ್ಠ 50 ಸಾವಿರ ವರಗೆ ಸಾಲ ಸೌಲಭ್ಯವನ್ನು ನಿಗಮದಿಂದ ನೇರವಾಗಿ ಮಂಜೂರು ಮಾಡಲಾಗುವುದು.
ಉದ್ಯಮಶೀಲತಾ ಯೋಜನೆಯಡಿ ಅರ್ಹ ನಿರುದ್ಯೋಗಿಗಳು ಸ್ವಯಂ ಉದ್ಯೋಗದಲ್ಲಿ ತೊಡಗಿಕೊಂಡು ಆದಾಯ ಗಳಿಸಲು ಬ್ಯಾಂಕಿನಿಂದ ಮಂಜೂರಾದ ಸಾಲದ ಉದ್ದೇಶಗಳಿಗೆ ಘಟಕ ವೆಚ್ಚ ಗರಿಷ್ಠ 2 ಲಕ್ಷ ರೂ., ಸಹಾಯಧನ ಮತ್ತು ಘಟಕ ವೆಚ್ಚ ಗರಿಷ್ಠ 3.50 ಲಕ್ಷ ರೂ., ಸಹಾಯಧನ ನಿಗಮದ ಸಹಾಯಧನವನ್ನು ಹೊರತುಪಡಿಸಿ ಘಟಕದ ವೆಚ್ಚದ ಉಳಿದ ಭಾಗವನ್ನು ಬ್ಯಾಂಕ್ ಸಾಲದಿಂದ ಭರಿಸಲಾಗುವುದು.
ಮೈಕ್ರೊ ಕ್ರೆಡಿಟ್ ಯೋಜನೆಯಡಿ ಮಹಿಳೆಯರಲ್ಲಿ ಗುಂಪು ಚಟುವಟಿಕೆಗಳಿಗೆ ಉತ್ತೇಜನ ನೀಡಲು ಮಹಿಳಾ ಸ್ವಸಹಾಯ ಸಂಘಗಳು ಸ್ವಯಂ ಉದೋಗ ಕೈಗೊಂಡು ಆದಾಯ ಗಳಿಸಲು ಕನಿಷ್ಠ 10 ಜನ ಸದಸ್ಯರಿರುವ ಮಹಿಳಾ ಸ್ವಸಹಾಯ ಗುಂಪಿಗೆ ಕನಿಷ್ಠ ರೂ.2.50 ಲಕ್ಷ ಸಾಲ ಮತ್ತು ಸಹಾಯಧನವನ್ನು ಮಂಜೂರು ಮಾಡಲಾಗುವುದು.
ಗಂಗಾಕಲ್ಯಾಣ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರು ಹೊಂದಿರುವ ಕುಷ್ಕಿ ಜಮೀನಿಗೆ ರೂ.3.50 ಲಕ್ಷದಿಂದ ರೂ.4.50 ಲಕ್ಷ ವೆಚ್ಚದಲ್ಲಿ ಕೊಳವೆ ಬಾವಿಯಿಂದ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು.
ಭೂಒಡೆತನ ಯೋಜನೆಯಡಿ ಭೂ ರಹಿತ ಕೃಷಿ ಕಾರ್ಮಿಕರಿಗೆ ಯೋಗ್ಯವಾದ ಜಮೀನು ಖರೀದಿಗೆ ರೂ.15 ಲಕ್ಷದಿಂದ ರೂ.20 ಲಕ್ಷ ಘಟಕ ವೆಚ್ಚದಲ್ಲಿ ಸಾಲ ಸೌಲಭ್ಯ ಮಂಜೂರು ಮಾಡಲಾಗುವುದು.
ಅರ್ಜಿ ಸಲ್ಲಿಸುವ ಫಲಾಪೇಕ್ಷಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಮತ್ತು ದಾಖಲೆಗಳನ್ನು ನಿಗಮದ ವೆಬ್‌ಸೈಟ್ http://kbdc.karnataka.gov.in ಮೂಲಕ ಸೆ.15 ರಿಂದ ಅ.14 ರವರೆಗೆ ಸಲ್ಲಿಸಬಹುದು. ಫಲಾಪೇಕ್ಷಿಗಳ ಅರ್ಜಿಗಳನ್ನು ಶಾಸಕರ ಅಧ್ಯಕ್ಷತೆಯಲ್ಲಿರುವ ಆಯ್ಕೆ ಸಮಿತಿಯ ಮೂಲಕ ಗುರಿಗನುಗುಣವಾಗಿ ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಕಛೇರಿಯನ್ನು ಸಂಪರ್ಕಿಸಬಹುದೆಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.