ಭುವನೇಶ್ವರಿ ತೇರು ಎಳೆದು ಕನ್ನಡದ ಹಿರಿಮೆ ಸಾರೋಣ! ಕನ್ನಡ ಪ್ರೀತಿ ನವೆಂಬರ್‌ಗೆ ಸೀಮಿತವಾಗದೆ ನಿತ್ಯೋತ್ಸವವಾಗಬೇಕು : ಜಿ.ಎಸ್. ಸುಶೀಲಾದೇವಿ

ದಾವಣಗೆರೆ: ಕನ್ನಡಿಗರೆಲ್ಲ ಒಂದಾಗಿ ನಮ್ಮ ತಾಯಿನುಡಿ ಕನ್ನಡವನ್ನು ಪ್ರೀತಿಸಿ, ಬೆಳೆಸುವುದರ ಜೊತೆಗೆ ತಾಯಿ ಭುವನೇಶ್ವರಿಯ ತೇರನ್ನು ಎಳೆದು ಕನ್ನಡದ ಹಿರಿಮೆಯನ್ನು ಸಾರೋಣ ಎಂದು ಸಾಹಿತಿ ಜಿ.ಎಸ್. ಸುಶೀಲಾದೇವಿ ಕರೆ ನೀಡಿದರು. ದಾವಣಗೆರೆ ಸಮೀಪದ ಎಲೆಬೇತೂರು ಗ್ರಾಮದ ಮಾಗಾನಹಳ್ಳಿ ಅಂಬಾಸಪ್ಪನವರ ಮೈದಾನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಏರ್ಪಡಿಸಿದ್ದ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದಿನ ಕನ್ನಡವು ಇಂಗಿಷ್ ಮಯವಾಗುತ್ತಿದ್ದು, ಪ್ರತಿಯೊಬ್ಬರೂ ಅಚ್ಚಕನ್ನಡದಲ್ಲಿಯೇ ಮಾತನಾಡಿ ಕನ್ನಡವನ್ನು ಉಳಿಸಬೇಕಾಗಿದೆ. ಮೊದಲು ನಮ್ಮ ಅನ್ನದ ಮತ್ತು ಚಿನ್ನದ ಭಾಷೆಯಾಗಿರುವ ಕನ್ನಡಕ್ಕೆ ಒತ್ತು ನೀಡೋಣ. ಬಳಿಕ ನಿಮ್ಮ ಬದುಕಿಗೆ ಅಗತ್ಯವಾಗಿದ್ದರೆ ಇನ್ನಿತರೆ ಭಾಷೆಯನ್ನು ಕಲಿಯಿರಿ ಎಂದು ಹೇಳಿದರು. ಕನ್ನಡಿಗರಲ್ಲಿ ಒಂದು ಅಧ್ಬುತವಾದ ಶಕ್ತಿ ಇದ್ದು, ನಾವು ನವೆಂಬರ್ ಕನ್ನಡಿಗರಾಗುವುದು ಬೇಡ. ವರ್ಷ ಇಡೀ ಕನ್ನಡಿಗರಾಗೋಣ ಎಂದು ಕಿವಿಮಾತು ಹೇಳಿದರು.

ಹಿಂದೆ ಕರ್ನಾಟಕವು ಹಲವು ಪ್ರಾಂತ್ಯಗಳಾಗಿ ಹರಿದುಹಂಚಿ ಚದುರಿ ಹೋಗಿತ್ತು. ಬಳಿಕ ಹಲವು ಕನ್ನಡಪರ ಹೋರಾಟಗಾರರ ತ್ಯಾಗದ ಫಲವಾಗಿ ಕನ್ನಡ ಸೀಮೆಗಳು ಒಂದಾಗಿ 1956ರ ನವೆಂಬರ್ ಒಂದರಂದು ಕನ್ನಡನಾಡು ಉದಯಿಸಿದ್ದರಿಂದ ಪ್ರತಿವರ್ಷ ಅಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಆದರೆ, ನಮ್ಮ ಕನ್ನಡ ಪ್ರೀತಿ ನವೆಂಬರ್‌ಗೆ ಸೀಮಿತವಾಗದೆ ನಿತ್ಯೋತ್ಸವವಾಗಬೇಕು ಎಂದು ಹೇಳಿದರು.

ಕನ್ನಡದ ಮೊದಲ ಕೃತಿ ಅಮೋಘವರ್ಷ ನೃಪತುಂಗನ ಕವಿರಾಜಮಾರ್ಗದಲ್ಲಿ ಹಾಗೂ ಕೇಶಿರಾಜನ ಶಬ್ದಮಣಿ ದರ್ಪಣದಲ್ಲಿ ಉಲ್ಲೇಖವಾದಂತೆ ಹಲವಾರು ಪದ್ಯಗಳ, ಕಾವ್ಯಗಳ ಆಧಾರದ ಮೇಲೆ ಕ್ರಿಸ್ತಶಕ ಆರು ಏಳನೆಯ ಶತಮಾನದಲ್ಲಿ ಕನ್ನಡ ಸಾಹಿತ್ಯದ ಉಗಮವಾಯಿತು ಎನ್ನಲಾಗಿದೆ. ಆದರೆ, ಕವಿರಾಜಮಾರ್ಗಕ್ಕಿಂತ ಹಿಂದಿನ ಕೃತಿಗಳ ಹತ್ತನೇ ಶತಮಾನದಿಂದ ಹನ್ನೆರಡನೇ ಶತಮಾನದವರೆಗಿನ ಕಾಲವನ್ನು ಹಳೆಗನ್ನಡ ಎಂದು ಗುರ್ತಿಸಬಹುದು ಎಂದು ಹೇಳಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!