ದಾವಣಗೆರೆ: ಮಾಯಕೊಂಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್ ನಾಯ್ಕ್ ಮಂಗಳವಾರ ನಗರದ ಗಾಂಧಿ ವೃತ್ತದಿಂದ ತೆರೆದ ವಾಹನದಲ್ಲಿ ಸಹಸ್ರಾರು ಕಾರ್ಯಕರ್ತರ ಜೊತೆ ಮೆರವಣಿಗೆಯಲ್ಲಿ ಆಗಮಿಸಿ ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ನಾನು ಉತ್ತಮ ಕೆಲಸ ಮಾಡಿರುವುದರಿಂದ ರಾಜ್ಯ ನಾಯಕರು, ರಾಷ್ಟ್ರ ನಾಯಕರು ನನ್ನನ್ನು ಗುರುತಿಸಿ ಟಿಕೆಟ್ ನೀಡಿದ್ದಾರೆ. ಈ ಬಾರಿ ಮಾಯಕೊಂಡದಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ಹೇಳಿದರು.
ಸಂಸದ ಜಿ. ಎಂ. ಸಿದ್ದೇಶ್ವರ, ಶಾಸಕ ಎಸ್. ಎ. ರವೀಂದ್ರನಾಥ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಶಿವಯೋಗಿಸ್ವಾಮಿ, ಮಂಡಲದ ಅಧ್ಯಕ್ಷ ದೇವೇಂದ್ರಪ್ಪ ಸೇರಿದಂತೆ ಎಲ್ಲಾ ನಾಯಕರು ಬೆಂಬಲವಾಗಿ ನಿಂತಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿಗೆ ಹಿನ್ನೆಡೆ ಆಗುವುದಿಲ್ಲ. ಐದು ಬಾರಿ ಬಿಜೆಪಿ ಪಕ್ಷವು ಮಾಯಕೊಂಡದಲ್ಲಿ ಜಯ ಗಳಿಸಿದೆ. ಆರನೇ ಬಾರಿಯೂ ಕಮಲ ಅರಳುವಂತೆ ಮಾಡಲು ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ ಎಂದು ತಿಳಿಸಿದರು.
ಬಂಡಾಯವೆದ್ದಿರುವ 11 ಜನರ ಪೈಕಿ ನಾಲ್ವರ ಜೊತೆ ಮಾತನಾಡಿದ್ದೇನೆ, ಸಹಜವಾಗಿಯೇ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದದಾರೆ. ನಾವೆಲ್ಲರೂ ಸಹೋದರರಂತೆ. ಇನ್ನೆರಡು ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ. ಅವರೆಲ್ಲಾ ನಾಮಪತ್ರ ಸಲ್ಲಿಕೆ ಮಾಡಬಹುದು ಆದರೆ ವಾಪಸ್ ತೆಗೆದುಕೊಳ್ಳಲು ಸಮಯಾವಕಾಶ ಇದೆ. ಮನವೊಲಿಸುವ ಕಾರ್ಯ ನಡೆಯುತ್ತಿದೆ. ಬಂಡಾಯದವರಿಗೆ ಮಣೆ ಹಾಕುವುದಿಲ್ಲ. ನನ್ನ ಮೇಲೆ ಯಾವುದೇ ಆರೋಪ ಮಾಡಿದರೂ ಮನವೊಲಿಸುವ ಪ್ರಯತ್ನ ನಡೆಸುತ್ತೇನೆ. ಬೇರೆ ಯಾವುದೇ ವಿಚಾರವಾದರೂ ಬಹಿರಂಗ ಚರ್ಚೆಗೂ ಸಿದ್ಧನಿದ್ದೇನೆ ಹೇಳಿದರು.
ಅವರಿಗೆ ಟಿಕೆಟ್ ಸಿಕ್ಕಿಲ್ಲ ಎಂದು ನನ್ನ ಮೇಲೆ ಆರೋಪ ಮಾಡಿದರೆ ಹೇಗೆ? ಬಿಜೆಪಿಯ ಮಾನದಂಡದಲ್ಲಿ ಉತ್ತೀರ್ಣ ಆದವರಿಗೆ ಟಿಕೆಟ್ ನೀಡಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೇರೆ ಪಕ್ಷಕ್ಕೆ ಹೋಗಿದ್ದಾಗಿ ಹೇಳಿರಬಹುದು. ಅದೇ ಬೇರೆ ವಿಚಾರ. ಈಗಿನ ಮಾನದಂಡದ ವಿಚಾರವೇ ಬೇರೆ. ಬೇರೆ ಪಕ್ಷದಿಂದ ಸ್ಪರ್ಧಿಸಿದ್ದರೂ ಮತ್ತೆ ಬಿಜೆಪಿಗೆ ವಾಪಸ್ ಕರೆ ತಂದು ಸ್ಥಾನಮಾನ ಕೊಡಲಾಗಿದೆ. ರಾಜ್ಯ ಉಪಾಧ್ಯಕ್ಷ, ರಾಜ್ಯ ಕೋರ್ ಕಮಿಟಿ ಹಾಗೂ ಜಿಲ್ಲಾ ಕೋರ್ ಕಮಿಟಿಯಲ್ಲಿ ಸ್ಥಾನ ನೀಡಲಾಗಿತ್ತು. ರಾಜ್ಯದಲ್ಲಿ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿ ಮತ್ತೆ ಟಿಕೆಟ್ ನೀಡಿದೆ. ಈ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ ಎಂದರು.
ಸಂಸದ ಜಿ. ಎಂ. ಸಿದ್ದೇಶ್ವರ ಮಾತನಾಡಿ, ಮಾಯಕೊಂಡ ವಿಶಿಷ್ಟ ಕ್ಷೇತ್ರ. ಈ ಹಿಂದೆ ಶಾಸಕರಾಗಿ ಬಸವರಾಜ್ ನಾಯ್ಕ್ ಉತ್ತಮ ಕೆಲಸ ಮಾಡಿದ್ದಾರೆ. ಈ ಬಾರಿ ಪಕ್ಷವು ಟಿಕೆಟ್ ಕೊಟ್ಟಿದೆ. ಎಲ್ಲರೂ ಕಮಲ ಅರಳುವಂತೆ ಮಾಡಿ. ಮಾಯಕೊಂಡ ಕ್ಷೇತ್ರದಲ್ಲಿ ಬಿಜೆಪಿ ಪರವಾದ ಅಲೆ ಇದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಡಂಬಲ್ ಎಂಜಿನ್ ಸರ್ಕಾರದ ಸಾಧನೆ ಮನೆ ಮನೆ ತಲುಪಿದರೆ ಗೆಲುವಿಗೆ ಕಷ್ಟವಾಗದು ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಶಾಸಕ ಪ್ರೊ. ಎನ್. ಲಿಂಗಣ್ಣ, ಮಾಯಕೊಂಡ ಬಿಜೆಪಿ ಮಂಡಲ ಅಧ್ಯಕ್ಷ ದೇವೇಂದ್ರಪ್ಪ ಮತ್ತಿತರರು ಹಾಜರಿದ್ದರು.
