ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಬಿಜೆಪಿ-ಕಾಂಗ್ರೆಸ್ ಮಾತಿನ ಚಕಮಕಿ.!

ಮಹಾನಗರ ಪಾಲಿಕೆ
ದಾವಣಗೆರೆ: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನವೀಕರಣಗೊಂಡಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಹೆಸರಿಡುವ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದ ಘಟನೆ ಮಹಾನಗರ ಪಾಲಿಕೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರಿಗೆ ಪಾಲಿಕೆ ಸಭಾಂಗಣದ ಪ್ರತಿಭಟನಾ ವೇದಿಕೆಯಾಗಿ ನಿರ್ಮಾಣವಾಗಿತ್ತು. ಒಂದು ಹಂತದಲ್ಲಿ ಪಾಲಿಕೆ ಆಯುಕ್ತರು ಸೇರಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಈ ಎರಡೂ ಪಕ್ಷಗಳ ಸದಸ್ಯರ ನಡೆಯಿಂದಾಗಿ ದಿಗ್ಭಾಂತರಾಗಿ ಕುಳಿತಿದ್ದರು.
ನಡೆದಿದ್ದಿಷ್ಟು, ಸಭೆಯಲ್ಲಿ ಮಹಾನಗರ ಪಾಲಿಕೆ ವಿಪಕ್ಷ ಸದಸ್ಯ ಎ.ನಾಗರಾಜ್ ಅವರು, ನವೀಕೃತಗೊಂಡಿರುವ ಖಾಸಗಿ ಬಸ್ ನಿಲ್ದಾಣಕ್ಕೆ 2005-06ನೇ ಸಾಲಿನಲ್ಲಿಯೇ ಶಾಮನೂರು ಶಿವಶಂಕರಪ್ಪ ಅವರ ಹೆಸರಿಡಲಾಗಿದೆ. ಆದಾಗ್ಯೂ ಅದನ್ನು ಬದಲಿಸಿ ಬೇರೆ ಹೆಸರು ನಾಮಕರಣ ಮಾಡಲು ಬಿಜೆಪಿ ಸದಸ್ಯರು ಮುಂದಾಗಿದ್ದಾರೆ. 2005ರಲ್ಲಿ ಶಿವಶಂಕರಪ್ಪನವರ ಹೆಸರಿಡಲು ನಗರಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಿ ಠರಾವು ಹೊರಡಿಸಲಾಗಿತ್ತು ಎಂದು ಠರಾವು ಪ್ರತಿ ಪ್ರದರ್ಶಿಸಿದರು.
ಶಾಮನೂರು ಶಿವಶಂಕರಪ್ಪ ಬಸ್ ನಿಲ್ದಾಣ ಎಂದು ನಾಮಕರಣ ಮಾಡಿ, ನಾಮಫಲಕವನ್ನೂ ಹಾಕಲಾಗಿತ್ತು. ಅದರ ಫೋಟೋ ಪ್ರತಿಗಳೂ ಇವೆ. ನಗರಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ, ಸರ್ಕಾರದ ಆದೇಶದಂತೆ ಶಾಮನೂರು ಶಿವಶಂಕರಪ್ಪನವರ ಹೆಸರು ನಾಮಕರಣ ಮಾಡಲಾಗಿದ್ದು, ಯಾವ ಕಾರಣಕ್ಕೂ ಹೆಸರು ಬದಲಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್ ಸೇರಿದಂತೆ ಕಾಂಗ್ರೆಸ್ ಸದಸ್ಯರು ನಾಗರಾಜ್ ಅವರ ಬೆಂಬಲಕ್ಕೆ ನಿಂತರು.
ಈ ವೇಳೆ ಬಿಜೆಪಿ ಸದಸ್ಯರಾದ ಎಸ್.ಟಿ.ವೀರೇಶ್, ಕೆ.ಪ್ರಸನ್ನ, ಬಿ.ಜಿ.ಅಜಯ್ ಕುಮಾರ್ ಇತರರು, ಖಾಸಗಿ ಬಸ್ ನಿಲ್ದಾಣಕ್ಕೆ ಅಜಾತ ಶತೃ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರು ಇಡಲು ತೀರ್ಮಾನಿಸಲಾಗಿದೆ ಈ ಹಿಂದೆ ನಾಮಕರಣ ಮಾಡಿದ್ದರ ಬಗ್ಗೆ ಸರ್ಕಾರಿ ಆದೇಶವಿದ್ದರೆ ತೋರಿಸಲಿ, ಅಲ್ಲದೇ ನಿಮಗೆ ಇಷ್ಟವಿಲ್ಲವಾದರೆ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲಿ ಎಂದು ಹೇಳಿದರು.
ಎರಡೂ ಪಕ್ಷಗಳ ಸದಸ್ಯರ ನಡುವೆ ಸುಮಾರು ಒಂದೂವರೆ ತಾಸುಗಳ ಕಾಲ ಈ ಕುರಿತು ಮಾತಿನ ಚಕಮಕಿಗಳು ನಡೆದವು. ಕಾಂಗ್ರೆಸ್ ಸದಸ್ಯರು ಯಾವ ಕಾರಣಕ್ಕೂ ಖಾಸಗಿ ಬಸ್ ನಿಲ್ದಾಣಕ್ಕೆ ಬೇರೆಯವರ ಹೆಸರು ಇಡಲು ಬಿಡುವುದಿಲ್ಲ ಎಂದು ಮೇಯರ್ ಮುಂಭಾಗ ನಿಂತು ಘೋಷಣೆಗಳನ್ನು ಕೂಗತೊಡಗಿದರು.
ಹಿಂದಿನ ಆದೇಶಕ್ಕೆ ಬೆಲೆ ಕೊಡದ ಬಿಜೆಪಿ ಸದಸ್ಯರಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರೆ,ಇತ್ತ ಬಿಜೆಪಿ ಸದಸ್ಯರು, ಸಭೆಯ ನಡವಳಿಕೆ ಬೆಲೆ ನೀಡದ ಕಾಂಗ್ರೆಸ್ ಸದ್ಯರಿಗೆ ಧಿಕ್ಕಾರ ಎಂದು ಘೋಷಣೆ ಕೂಗತೊಡಗಿದರು.
ಇದರಿಂದಾಗಿ ಸಾಮಾನ್ಯ ಸಬೆ ಗೊಂದಲದ ಗೂಡಾಗಿ ಮಾರ್ಪಟ್ಟಿತ್ತು. ಮಧ್ಯಾಹ್ನ 3 ಗಂಟೆಯಾದರೂ ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ ಅವರ ಅಧ್ಯಕ್ಷತೆಯಲ್ಲಿ ಯಾವ ತೀರ್ಮಾನವನ್ನೂ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.
ಇದಕ್ಕೂ ಮುನ್ನ ಸಭೆಯ ಆರಂಭದಲ್ಲಿಯೇ ವಾರ್ಡುಗಳಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಶೂನ್ಯ ಸಮಯ ನೀಡಬೇಕು ಎಂದು ಕಾಂಗ್ರೆಸ್ ಸದ್ಯರು ಮಹಾಪೌರರಲ್ಲಿ ವಿನಂತಿಸಿದಾಗ, ಬಿಜೆಪಿ ಸದಸ್ಯರು ಆಕ್ಷೇಪಿಸಿದರು.
ಆರು ತಿಂಗಳ ನಂತರ ಸಾಮಾನ್ಯ ಸಭೆ ಕರೆಯಲಾಗಿದೆ. ಸಮಸ್ಯೆಗಳು ಸಾಕಷ್ಟಿವೆ. ಅರ್ಧಗಂಟೆಯಾದರೂ ಸಮಯ ನೀಡುವಂತೆ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು. ಸಮಯ ನೀಡುವ ಬಗ್ಗೆಯೇ ಸುಮಾರು 20ನಿಮಿಷ ಚರ್ಚೆಯಾಯಿತು. ಕೊನೆಗೂ ಕಾಂಗ್ರೆಸ್ ಸದಸ್ಯರ ಒತ್ತಡಕ್ಕೆ ಮಣಿದು ಸಮಸ್ಯೆಗಳ ಚರ್ಚೆಗೆ ಸಮಯ ನೀಡಲಾಯಿತು.