ಬಿಜೆಪಿಗರು ಜನಾಶೀರ್ವಾದ ಯಾತ್ರೆ ಬದಲು ಜನರ ಕ್ಷಮಾಪಣಾ ಯಾತ್ರೆ ನಡೆಸಲಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಟೀಕೆ
ದಾವಣಗೆರೆ: ಅಧಿಕಾರಕ್ಕೆ ಬಂದರೆ ಸ್ವರ್ಗ ತೋರಿಸುವುದಾಗಿ ನಂಬಿಸಿದ್ದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಳೆದ ಏಳು ವರ್ಷಗಳಲ್ಲಿ ದೇಶದ ಜನರಿಗೆ ನರಕ ದರ್ಶನ ಮಾಡಿಸಿದೆ. ಇವರು ಜನಾಶೀರ್ವಾದ ಯಾತ್ರೆಯ ಬದಲು ‘ಜನರಕ್ಷಮೇ ಕೇಳುವ ಯಾತ್ರೆ’ ಮಾಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ವ್ಯಂಗ್ಯವಾಡಿದ್ದಾರೆ.
ನಗರದ ಪೂಜಾ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊರೊನಾದ ಈ ಎರಡು ವರ್ಷಗಳಲ್ಲಿ ದೇಶದ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಅಕ್ಷರಶಃ ಅವರ ಬದುಕು ಬೀದಿಗೆ ಬಿದ್ದಿದ್ದು, ಇಂತಹ ಹೊತ್ತಲ್ಲಿ ಜನಾಶೀರ್ವಾದ ಯಾತ್ರೆ ಸಮಂಜಸವೇ ಎಂದು ಪ್ರಶ್ನಿಸಿದರು.
ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರು, ಮುಖಂಡರುಗಳು ಕೋವಿಡ್ ಎರಡನೇ ಅಲೆಯಲ್ಲಿ ಲಕ್ಷಾಂತರ ಜನರ ಸಾವಿಗೆ ಕಾರಣರಾಗಿರುವುದಕ್ಕೆ, ರಾಜ್ಯಕ್ಕೆ ಜಿಎಸ್ಟಿ ಪಾಲು ನೀಡಲು ವಿಫಲರಾಗಿರುವುದಕ್ಕೆ, ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಮಾಡಿ ಜನರನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ದೂಡುತ್ತಿರುವುದಕ್ಕೆ ಜನರ ಕ್ಷಮೆ ಕೋರಬೇಕು. ಇಲ್ಲದಿದ್ದರೆ ಜನ ಬಿಜೆಪಿ ವಿರುದ್ಧ ಆಕ್ರೋಶದ ಯಾತ್ರೆ ನಡೆಸುತ್ತಾರೆ ಎಂದು ಎಚ್ಚರಿಸಿದರು.
ಕರೋನಾದಿಂದ ಈಗಾಗಲೇ ಇಡೀ ವಿಶ್ವವೇ ಕಂಗೆಟ್ಟಿದೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಮೂರನೇ ಅಲೆ ತಡೆಯಲು ಯಾವ ಕ್ರಮ ಕೈಗೊಂಡಿವೆ ಬಹಿರಂಗ ಪಡಿಸಬೇಕು. ಹೀಗೆ ಸಾವಿರಾರು ಜನರನ್ನ ಸೇರಿಸಿ ಜನಾಶೀರ್ವಾದ ಯಾತ್ರೆ ಮಾಡುತ್ತಾರೆ. ಕೋವಿಡ್ ಮೂರನೇ ಅಲೆ ಶುರುವಾದರೆ ಜನಾಶೀರ್ವಾದ ಯಾತ್ರೆ ಮಾಡುವ ರಾಜ್ಯದ ಈ ನಾಲ್ಕು ಜನ ಕೇಂದ್ರ ಸಚಿವರೇ ಹೊಣೆಯಾಗುತ್ತಾರೆ ಎಂದು ದೂರಿದರು.
ಪ್ರಧಾನಿ ಮೋದಿ ಅವರು ಕಪ್ಪು ಹಣ ತಂದು, ಪ್ರತಿಯೊಬ್ಬರ ಖಾತೆಗೆ ಹದಿನೈದು ಲಕ್ಷ ಹಾಕ್ತೀನಿ ಅಂದಿದ್ದರು. ಆದರೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ ಎಂದು ಹರಿಹಾಯ್ದರು.
ಬಿಜೆಪಿ ಪಕ್ಷದ ಹಿರಿಯರನ್ನು ಉಳಿಸಿಕೊಳ್ಳಲು ವೈಫಲ್ಯ ಹೊಂದಿದೆ. ಕರ್ನಾಟಕದಲ್ಲಿ ಪಕ್ಷ ಕಟ್ಟಿದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಯಾಕೆ ಎಂಬ ಪ್ರಶ್ನೆಗೆ ಬಿಜೆಪಿ ಹೈಕಮಾಂಡ್ ಉತ್ತರಿಸಬೇಕು. ಜತೆಗೆ ಯಡಿಯೂರಪ್ಪ ಅವರ ಕಣ್ಣೀರಿನ ಕಥೆ ಬಗ್ಗೆ ಉತ್ತರ ಸಿಗಬೇಕಿದೆ ಎಂದರು.
ಕಾಂಗ್ರೆಸ್‌ನಲ್ಲಿ ಯಾವ ಹಿರಿಯರನ್ನೂ ಮೂಲೆಗುಂಪು ಮಾಡಲಾಗಿಲ್ಲ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮ ಪಕ್ಷವನ್ನ ಅಧಿಕಾರಕ್ಕೆ ತರುವ ಗುರಿ ನಮ್ಮದು ಎಂದು ಸಲೀಂ ಅಹಮದ್ ಹೇಳಿದರು.
ಬರಲಿರುವ ಜಿಪಂ, ತಾಪಂ, ವಿಧಾನಸಭಾ ಉಪಚುನಾವಣೆ ಮತ್ತು ಸ್ಥಳಿಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಹೆಚ್ಚು ಸಂಖ್ಯೆಯಲ್ಲಿ ಗೆಲ್ಲಲಿದೆ ಎಂದರು.
ಗೋಷ್ಟಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಜಿಲ್ಲಾಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ವಕ್ತಾರ ಡಿ.ಬಸವರಾಜ್, ಮುಖಂಡರಾದ ಎಂ.ಟಿ.ಸುಭಾಶ್ಚಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ಇತರರು ಹಾಜರಿದ್ದರು.