ಬಿಜೆಪಿಯ ಜನಾಶೀರ್ವಾದ ಯಾತ್ರೆ ಯಾವ ಪುರುಷಾರ್ಥಕ್ಕೆ: ಜಿಕ್ರಿಯಾ

ದಾವಣಗೆರೆ: ಕೊರೋನಾದಂಥ ಸಂಕಷ್ಟ ಕಾಲದಲ್ಲಿ ದೇಶದ ಜನರು ಎಲ್ಲಾ ವಿಧಗಳಲ್ಲಿ ತತ್ತರಿಸಿರುವ ಸಂದರ್ಭದಲ್ಲಿ ಆಡಳಿತ ಪಕ್ಷದ ನಾಯಕರು ಜನಾಶೀರ್ವಾದ ಯಾತ್ರೆ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಕಾರ್ಯದರ್ಶಿ ಮೊಹಮ್ಮದ್ ಜಿಕ್ರಿಯಾ ಪ್ರಶ್ನಿಸಿದ್ದಾರೆ.
ಕೊರೊನಾ ಮೊದಲನೇ ಹಾಗೂ ಎರಡನೇ ಅಲೆಯಿಂದ ಸಾಕಷ್ಟು ಸಾವು-ನೋವುಗಳು ಸಂಭವಿಸಿದ್ದು, ಜನರು ಆರ್ಥಿಕ ಸಂಕಷ್ಟ ಅನುಭವಿಸಿದ್ದಾರೆ. ಕರೋನಾದಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಘೋಷಿಸಿರುವ ಒಂದು ಲಕ್ಷ ರೂಪಾಯಿ ಪರಿಹಾರಧನ ಇದುವರೆಗೂ ತಲುಪದೇ ಇರುವುದರಿಂದ ಕುಟುಂಬ ನಿರ್ವಹಿಸಲಾಗದ ಸಂಕಷ್ಟದಲ್ಲಿದ್ದಾರೆ. ಅಂಥವರಿಗೆ ಪರಿಹಾರಧನ ಕೊಡಿಸುವ ಕಾರ್ಯಕ್ರಮ ಕೈಗೊಳ್ಳುವುದನ್ನು ಬಿಟ್ಟು, ಇವರ ಸ್ವಾರ್ಥಕ್ಕಾಗಿ ಜನಾಶೀರ್ವಾದ ಯಾತ್ರೆ ಅಂತಹ ಸಮಾರಂಭ ಮಾಡುತ್ತಿರುವುದು ನೋಡಿದರೆ ಇವರಿಗೆ ಜನರ ಬಗ್ಗೆ ಕಾಳಜಿ ಎಷ್ಟಿದೆ ಎನ್ನುವುದು ಗೊತ್ತಾಗುತ್ತದೆ ಎಂದು ಹರಿಹಾಯ್ದಿದ್ದಾರೆ.
ಕೊರೊನ ಎರಡನೇ ಅಲೆಯಲ್ಲಿ ಸಧ್ಯ ಯಾವುದೇ ಹಬ್ಬ, ಜಾತ್ರೆ ಎಲ್ಲದಕ್ಕೂ ನಿರ್ಬಂಧ ಹೇರಿರುವ ಸರ್ಕಾರ ಈ ಯಾತ್ರೆಗೆ ಅನುಮತಿ ಕೊಟ್ಟಿರುವುದು ಯಾಕೆ? ವಿರೋಧ ಪಕ್ಷದವರಿಗೆ ಯಾವುದೇ ಪ್ರತಿಭಟನೆಗೆ ಅವಕಾಶ ನೀಡದೆ ಪ್ರತಿಯೊಂದಕ್ಕೂ ಕೋವಿಡ್ ನಿಯಮಾವಳಿಯನ್ನು ರೂಪಿಸಿರುವ ಸರ್ಕಾರ ಈ ಯಾತ್ರೆಗೆ ಅವಕಾಶವನ್ನು ಯಾವ ಆಧಾರದ ಮೇಲೆ ನೀಡಿದ್ದಾರೆ ಎಂದು ಜನತೆಗೆ ತಿಳಿಸಬೇಕು ಎಂದಿದ್ದಾರೆ.
ರೈತರ ಹಲವಾರು ಸಮಸ್ಯೆಗಳಿವೆ ಅವರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಸರ್ಕಾರವು ಕೆಲಸಕ್ಕೆ ಬಾರದ ಇಂಥಾ ಯಾತ್ರೆ ಮಾಡುವುದಕ್ಕೆ ಜನ ಯಾವ ರೀತಿ ಆಶೀರ್ವಾದ ಮಾಡಲಿದ್ದಾರೆ ಎಂದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಸರ್ಕಾರ ರಚಿಸಲು ಹಲವಾರು ದಿನ, ಸಚಿವ ಸಂಪುಟ ವಿಸ್ತರಿಸಲು ಮತ್ತೆ ಅತೃಪ್ತರನ್ನು ತೃಪ್ತಿ ಪಡಿಸಲು ಮಾತ್ರ ಸರ್ಕಾರ ಸ್ಪಂದಿಸುತ್ತಿದ್ದು, ಜನರ ಕಷ್ಟ ಕೇಳುವುದನ್ನು ಬಿಟ್ಟು ಇಂಥಾ ಅಸಂಬದ್ಧ ಯಾತ್ರೆಗಳಿಂದ ಕೇವಲ ಕಾಲಹರಣ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಶಾಲೆಗಳನ್ನು ಆರಂಭಿಸಲು ಮೀನಾಮೇಷ ಎಣಿಸುತ್ತಿರುವ ಸರ್ಕಾರ, ಮಕ್ಕಳ ಭವಿಷ್ಯದ ಬಗ್ಗೆ ಸರ್ಕಾರ ಚಿಂತಿಸದೇ ಕೇವಲ ತಮ್ಮ ರಾಜಕೀಯ ಲಾಭಕ್ಕಾಗಿ ಇಂಥಾ ಯಾತ್ರೆ ಮಾಡುತ್ತಿದೆ. ಇದೆಲ್ಲವನ್ನು ಸೂಕ್ಶ್ಮವಾಗಿ ಗಮನಿಸುತ್ತಿರುವ ಜನತೆ ಮುಂದಿನ ದಿನಗಳಲ್ಲಿ ಇಂಥ ಟೈಮ್ ಪಾಸ್ ಸರ್ಕಾರಕ್ಕೆ ತಮ್ಮದೇ ಶೈಲಿಯಲ್ಲಿ ತಕ್ಕ ಆಶೀರ್ವಾದ ಮಾಡಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.