ಹರಜಾತ್ರೆಯಲ್ಲಿ ಸಿಎಂ ವಿರುದ್ಧ ಕಪ್ಪುಬಾವುಟ ಪ್ರದರ್ಶನ; ಅಶೋಕ್ ಗೋಪನಹಾಳ್

ದಾವಣಗೆರೆ: ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುತ್ತೇವೆ ಎಂದು ತಾಯಿ ಮೇಲೆ ಆಣೆ ಮಾಡಿ ಮಾತು ತಪ್ಪಿದ ಮುಖ್ಯಮಂತ್ರಿ ವಿರುದ್ಧ ಹರಜಾತ್ರೆಯಲ್ಲಿ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಆರ್.ವಿ. ಅಶೋಕ್ ಗೋಪನಹಾಳ್ ಹೇಳಿದ್ದಾರೆ.

ಹರಿಹರದ ಪೀಠದವರು ಯಾವ ಪುರುಷಾರ್ತಕ್ಕಾಗಿ ಹರಜಾತ್ರೆ ಮಾಡುತ್ತಿದ್ದಾರೆ ಮತ್ತು ಮಾತು ತಪ್ಪಿರುವ ಮುಖ್ಯಮಂತ್ರಿಗಳನ್ನು ಹರಜಾತ್ರೆಗೆ ಆಹ್ವಾನ ಮಾಡುವ ಉದ್ದೇಶವಾದರೂ ಏನಿತ್ತು ? ಎಂದು ಪ್ರಶ್ನಿಸಿರುವ ಅವರು, ಕೂಡಲಸಂಗಮ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಶ್ರೀಗಳು ಸಮಾಜದ ಉದ್ಧಾರಕ್ಕಾಗಿ ಹೋರಾಟ ಮಾಡಿದರೆ, ಹರಿಹರದ ಶ್ರೀಗಳು ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ದೂಷಿಸಿದ್ದಾರೆ.

ಸರಕಾರ ಸಮಾಜದ ಬೇಡಿಕೆಯನ್ನು ಈಡೇರಿಸುವಲ್ಲಿ ವಿಫಲವಾಗಿದ್ದರೂ ಸಹ ಮುಖ್ಯಮಂತ್ರಿಗಳನ್ನು ಕರೆದು ಅವರಿಂದ ಭಾಷಣ ಮಾಡಿಸುವ ಉದ್ದೇಶವಾದರೂ ಏನು? ಬುದ್ದಿಜೀವಿಗಳು, ಯೋಗಪಟುಗಳು, ಕಾನೂನನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಂಡಂತಹವರು ಹರಜಾತ್ರೆ ಮೂಲಕ ಸಮಾಜಕ್ಕೆ ಯಾವ ಸಂದೇಶ ಕೂಡಲು ಹೊರಟಿದ್ದೀರಿ ಎಂದು ವಚನಾನಂದ ಶ್ರೀಗಳನ್ನು ಪ್ರಶ್ನಿಸಿದ್ದಾರೆ.

ಸಮಾಜ ಬಾಂಧವರಿಗೆ ಮಲತಾಯಿ ಧೋರಣೆಯನ್ನು ಮಾಡಿದಂತ ಮುಖ್ಯಮಂತ್ರಿ, ಸರ್ಕಾರದ ಶಾಸಕರು, ಸಚಿವರುಗಳನ್ನು ಆಹ್ವಾನಿಸಿ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡುವ ಬದಲು ಸರ್ಕಾರದ ಜೊತೆ ಹೋರಾಟ ಮಾಡಿ 2 ಎ ಮೀಸಲಾತಿ ಪಡೆದು ಸಮಾಜದವರಿಗೆ ನೀಡಿದ್ದರೆ ಶ್ರೀ ಪೀಠವನ್ನು, ತಮ್ಮನ್ನು ಹೊತ್ತು ಮೆರೆಸುತ್ತಿದ್ದರು ಎಂದಿದ್ದಾರೆ.

ಇಡೀ ಕರ್ನಾಟಕ ರಾಜ್ಯ ಪಂಚಮಸಾಲಿ ಸಮಾಜ ಬಾಂಧವರು ಹರಜಾತ್ರೆ ಬೇಕಾ ಅಥವಾ 2ಎ ಮೀಸಲಾತಿ ಬೇಕಾ ಎಂಬುದನ್ನು ನೀವೆ ನಿರ್ಧರಿಸಿ. ಸ್ವಾಭಿಮಾನಿ ಪಂಚಮಸಾಲಿಗಳು ಹರಿಹರದ ಹರಜಾತ್ರೆಗೆ ಭಾಹವಹಿಸುತ್ತಿರುವ ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲು ಸ್ವಾಭಿಮಾನಿ ಪಂಚಮಸಾಲಿಗಳು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!