ಈಶ್ವರಮ್ಮ ಶಾಲೆಯಲ್ಲಿ ಪುಸ್ತಕ ಪಂಚಮಿ
ದಾವಣಗೆರೆ: ನಗರದ ಈಶ್ವರಮ್ಮ ಪ್ರೌಢಶಾಲೆಯಲ್ಲಿ ಜ.4ರ ಇಂದು ಪುಸ್ತಕ ವಾಚನ ಸಹಾಯ ಯೋಜನೆಯಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಪುಸ್ತಕ ಪಂಚಮಿ 13ನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿದೆ.
ಡಾ.ಹೆಚ್.ಎಫ್. ಕಟ್ಟೀಮನಿ ಪ್ರೌಢಶಿಕ್ಷಣ ಪ್ರತಿಷ್ಠಾನ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಧಾರವಾಡ ಹಾಗೂ ದಾವಣಗೆರೆ ಘಟಕಗಳ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಸಂಚಾಲಕ ಪ್ರಕಾಶ್ ಬೂಸ್ನೂರು ಹಾಗೂ ಸಹ ಸಂಚಾಲಕ ಡಾ.ಸಿ.ಆರ್ ಬಾಣಾಪುರ್ ಮಠ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪುಸ್ತಕ ವಾಚನ ಸಹಾಯ ಯೋಜನೆಯಡಿ ಕಳೆದ 12 ವರ್ಷಗಳಿಂದ ಕಾರ್ಯಕ್ರಮ ನಡೆಸಿಕೊಂಡು ಬರಲಾಗಿದ್ದು, 12 ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 68 ವಿದ್ಯಾರ್ಥಿಗಳಿಗೆ ಪ್ರತಿ ವಿದ್ಯಾರ್ಥಿಗೆ ಶಬ್ದಕೋಶ, ವ್ಯಾಕರಣ, ಅಟ್ಲಾಸ್, ಕ್ವಿಜ್, ಸಾಮಾನ್ಯಜ್ಞಾನ, ಐತಿಹಾಸಿಕ ಮೊದಲಾದ ಸುಮಾರು 440 ರೂ. ಮೌಲ್ಯದ ಪುಸ್ತಕಗಳನ್ನು ನೀಡಲಾಗುವುದು ಎಂದರು.
ಇಂದು ಮಧ್ಯಾಹ್ನ 2:30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಜಿ.ಆರ್.ತಿಪ್ಪೇಶಪ್ಪ ಅತಿಥಿಗಳಾಗಿ ಭಾಗವಹಿಸುವರು, ಈಶ್ವರಮ್ಮ ಶಾಲಾಡಳಿತ ಮಂಡಳಿ ಅಧ್ಯಕ್ಷರಾದ ಕೆ.ಆರ್.ಸುಜಾತ ಕೃಷ್ಣ ಅಧ್ಯಕ್ಷತೆ ವಹಿಸುವರು, ಪ್ರಾಂಶುಪಾಲ ಕೆ.ಎಸ್.ಪ್ರಭುಕುಮಾರ್ ಉಪಸ್ಥಿತರಿರುವರು ಎಂದು ತಿಳಿಸಿದರು.
ವಿ.ಸಿ.ಪುರಾಣಿಕ್‌ಮಠ್, ಪ್ರಭುಸ್ವಾಮಿ ಆರ್. ಬಾಣಾಪುರ್‌ಮಠ್ ಸುದ್ದಿಗೋಷ್ಠಿಯಲ್ಲಿದ್ದರು.