ಉಚ್ಚೆಂಗೆಮ್ಮದೇವಿಗೆ 371 ತೆಂಗಿನಕಾಯಿ ಒಡೆದು ಭಕ್ತಿ ಸಮರ್ಪಣೆ.! 371ಜೆ ಸೌಲಭ್ಯ.! ಏನಿದು ದೇವಿ ಮಹಿಮೆ.!
ಹರಪನಹಳ್ಳಿ: ಅಸಂಖ್ಯಾತ ಭಕ್ತರಿಂದ ಆರಾಧಿಸುವ ಉಚ್ಚಂಗಿದುರ್ಗದ ಅಧಿದೇವತೆ ಉಚ್ಚೆಂಗೆಮ್ಮದೇವಿಗೆ ಹರಪನಹಳ್ಳಿ ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಅವರ ಅಭಿಮಾನಿಗಳು ಹರಪನಹಳ್ಳಿ ಕ್ಷೇತ್ರದ ಮೊದಲ ಮಹಿಳಾ ಶಾಸಕಿಯಾಗಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರ ಗೆಲುವು ಹಾಗೂ 371ಜೆ ಕಲಂ ಸೌಲಭ್ಯ ನಾನು ಮಾಡಿಸಿದ್ದು ಎಂದು ಸುಳ್ಳು ಹೇಳಿದವರಿಗೆ ದೇವಿಯು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ ಹಿನ್ನೆಲೆಯಲ್ಲಿ ಉಚ್ಚೆಂಗೆಮ್ಮದೇವಿಗೆ 371 ತೆಂಗಿನಕಾಯಿ ಒಡೆದು ಭಕ್ತಿ ಸಮರ್ಪಿಸಿದ್ದಾರೆ.
ಹರಪನಹಳ್ಳಿ ಉಪ್ಪಾರಗೇರಿಯ ಶಿಕ್ಷಕರಾದ ಮೇಘರಾಜ್ ಅವರ ನೇತೃತ್ವದಲ್ಲಿ ಉಚ್ಚಂಗಿದುರ್ಗದ ಉಚ್ಚೆಂಗೆಮ್ಮದೇವಿ ಸನ್ನಿಧಾನಕ್ಕೆ ಆಗಮಿಸಿದ್ದ ಮುಖಂಡರು ತೆಂಗಿನಕಾಯಿ ಇಟ್ಟು ದೇವಿಗೆ ವಿಶೇಷ ಪೂಜೆ ಮಾಡಿಸಿದ್ದರು. ನಂತರ ಪಾದಗಟ್ಟೆಯ ಬಳಿ ತೆಂಗಿನಕಾಯಿ ಒಡೆದು ಭಕ್ತಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕ ಮೇಘರಾಜ್ ಅವರು ಮಾತನಾಡಿ, ಕಳೆದ ವಿಧಾನ ಪರಿಷತ್ ಚುನಾವಣೆ ವೇಳೆ ಮಾಜಿ ಸಚಿವರು, ಹೂವಿನಹಡಗಲಿ ಶಾಸಕರಾಗಿದ್ದ ಪಿ.ಟಿ.ಪರಮೇಶ್ವರನಾಯ್ಕ ಅವರು ಉಚ್ಚಂಗಿದುರ್ಗ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ಅವರ ಪರವಾಗಿ ಮತಯಾಚನೆ ವೇಳೆ ಹರಪನಹಳ್ಳಿ ತಾಲೂಕಿಗೆ 371ಜೆ ಕಲಂ ಸೌಲಭ್ಯ ಒದಗಿಸಿದ್ದು ನಾನೇ ಎಂದು ಹೇಳಿದ್ದರು. ಸಭೆಯಲ್ಲಿಯೇ ‘ನಾನು ಸೌಲಭ್ಯ ಕಲ್ಪಿಸಿದ್ದು ನೀವಲ್ಲ, ಎಂ.ಪಿ.ರವೀಂದ್ರ’ ಎಂದು ಹೇಳಿದ್ದೆ. ಅಂದು ನಿಜಕ್ಕೂ ಉಚ್ಚೆಂಗೆಮ್ಮದೇವಿ ತಾಯಿ ನೀನು ಇದ್ದರೆ ಖಂಡಿತವಾಗಿ ಯಾರು ಎನ್ನುವುದಕ್ಕೆ ಚುನಾವಣೆಯಲ್ಲಿ ಉತ್ತರ ಕೊಡು ಎಂದು ಬೇಡಿ ಕೊಂಡಿದ್ದೆ. ಅದರಂತೆ ಪರಮೇಶ್ವರನಾಯ್ಕ ಚುನಾವಣೆಯಲ್ಲಿ ಸೋತಿದ್ದಾರೆ. ಸುಳ್ಳು ಹೇಳಿದ್ದಕ್ಕೆ ದೇವಿ ತಕ್ಕ ಪಾಠ ಕಲಿಸಿದ್ದಾಳೆ. ಹೀಗಾಗಿ ದೇವಿಗೆ 371 ತೆಂಗಿನಕಾಯಿ ಒಡೆದು ಭಕ್ತಿ ಸಮರ್ಪಣೆ ಮಾಡಿದ್ದೇವೆ ಎಂದು ತಿಳಿಸಿದರು.
ಮುಖಂಡರಾದ ಗುಡಿ ನಾಗಾರಾಜ್, ಜಕಾತಿ ಆನಂದ, ಗುಡೆಕಟ್ಟೆಕೆರೆ ಅಂಜಿನಪ್ಪ, ಶಿಕಾರಿ ಅಂಜಿನಪ್ಪ, ಮಟ್ಟೇರ ಮಂಜುನಾಥ, ಗ್ರಾಮ ಪಂಚಾಯತಿ ಸದಸ್ಯರ ತಾಲ್ಲೂಕು ಒಕ್ಕೂಟದ ಅಧ್ಯಕ್ಷರಾದ ಕಡಬಗೆರೆ ಕಾರ್ತಿಕ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.