ಶಾಸಕ ರೇಣುಕಾಚಾರ್ಯರ ಗಡಿಪಾರಿಗೆ ಬಿಎಸ್‌ಪಿ ಆಗ್ರಹ
ದಾವಣಗೆರೆ: ಬೇಡಜಂಗಮ ಜಾತಿ ಪ್ರಮಾಣ ಪತ್ರ ಪಡೆದಿರುವ ಎಂ.ಪಿ ರೇಣುಕಾಚಾರ್ಯ ಅವರನ್ನು ವಿಧಾನಸಭಾ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಬಹುಜನ ಸಮಾಜ ಪಕ್ಷದಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಹೆಚ್. ಮಲ್ಲೇಶ್, ಹುಟ್ಟಿನಿಂದ ಹಿಂದೂ ಲಿಂಗಾಯತ ಜಂಗಮರಾಗಿ ರಾಜಕಾರಣಕ್ಕಾಗಿ ಹಾಗೂ ಸರಕಾರಿ ಸೌಲಭ್ಯಕ್ಕಾಗಿ
ಬೇಡಜಂಗಮರು ಎಂದು ಎಂ.ಪಿ ರೇಣುಕಾಚಾರ್ಯ ಹಾಗೂ ಹರಿಹರ ತಾಲ್ಲೂಕಿನ ಜಿಲ್ಲಾ ಪಂಚಾಯತ ಸದಸ್ಯರಾಗಿದ್ದ ಬಿ.ಎಂ. ವಾಗೀಶಸ್ವಾಮಿ ನಕಲಿ ಪ್ರಮಾಣ ಪತ್ರ ಪಡೆದು ಪರಿಶಿಷ್ಟರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೇಡ ಜಂಗಮರು ಕೆಟಗರಿ ೩ಎ ಯಲ್ಲಿ ಬರುತ್ತಾರೆ. ಬೇಡಜಂಗಮರು ವೀರಶೈವ ಜಂಗಮರಲ್ಲ ಅವರೆಲ್ಲ ಆಂಧ್ರ ಮೂಲದಿಂದ ವಲಸೆ ಬಂದಿದ್ದು, ಅವರು ಮಾದಿಗ ಅಥವಾ ವಲಯ ಜಾತಿ ಜನರಿಗೆ ಮಾತ್ರ ಧರ್ಮಗುರುಗಳು ಆದರೆ ಈಗ ನಕಲಿ ಪ್ರಮಾಣ ಪತ್ರ ಪಡೆದು ಪರಿಶಿಷ್ಟರ ಸೌಲಭ್ಯ ಕಿತ್ತುಕೊಳ್ಳಲು ಹುನ್ನಾರ ನಡೆಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೊನ್ನಾಳಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹುಟ್ಟಿನಿಂದ ಲಿಂಗಾಯತರು ಆದರೆ ಅವರಿಗೆ ಜನಸಿದ ಮಗಳು ಎಂ.ಆರ್ . ಚೇತನ ಅಸ್ಪೃಶ್ಯ ಜಾತಿಯ ನಕಲಿ ಬೇಡಜಂಗಮಳಾಗಿದ್ದು ಹೇಗೆ? ಅವರ ಮಗ ಅಮೇರಿಕದಲ್ಲಿದ್ದು ಲಿಂಗಾಯತ ತಂದೆಯ ಮಗನಾದ ಹಾಗೂ ರೇಣುಕಾಚಾರ್ಯನ ಸಹೋದರ ದ್ವಾರಕಾನಾಥಯ್ಯ ನಕಲಿ ಬೇಡಜಂಗಮರಾಗಿದ್ದು ಹೇಗೆ ಎಂದು ಪ್ರಶ್ನಿಸಿದರು.
ಬೇಡಜಂಗಮ ವಂಶದವರಾದ ಹರಿಹರ ತಾಲ್ಲೂಕಿನ ಮಲೆಬೆನ್ನೂರಿನ ವಾಗೀಶ ಸ್ವಾಮಿಯು ಜಿಲ್ಲಾ ಪಂಚಾಯತ ಕ್ಷೇತ್ರದಲ್ಲಿ ಸ್ಪರ್ಧಿಸುವಾಗ ಲಿಂಗಾಯತನೆಂದು ಸಾಮಾನ್ಯ ಕ್ಷೇತ್ರದಲ್ಲಿ ಜಯಗಳಿಸಿದ್ದು, ಈಗ ಮಾಯಾಕೊಂಡ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಬೇಡಜಂಗಮನೆಂದು ಹೇಳಿಕೊಂಡು ಅಸ್ಪೃಶ್ಯ ಸಮುದಾಯದವರಿಗೆ ಇರುವ ಒಂದು ಕ್ಷೇತ್ರವನ್ನು ಕೂಡ ಕಸಿದುಕೊಳ್ಳುವ ಹುನ್ನಾರ ನಡೆಸಿದ್ದಾರೆ. ಆದ್ದರಿಂದ ರೇಣುಕಾಚಾರ್ಯ ಕುಟುಂಬ ಮತ್ತು ವಾಗೀಶ ಸ್ವಾಮಿಯ ಬೇಡಜಂಗಮ ಸರ್ಟಿಫಿಕೆಟ್‌ನ್ನು ರದ್ದು ಪಡಿಸಬೇಕು ಎಂ.ಪಿ. ರೇಣುಕಾಚಾರ್ಯರನ್ನು ಪರಿಶಿಷ್ಟರ ದೌರ್ಜನ್ಯ ಕಾಯ್ದೆಯಡಿ ಬಂಧಿಸಿ, ರಾಜ್ಯದಿಂದಲೇ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಂ. ಚಂದ್ರಪ್ಪ, ಕರಿಬಸಪ್ಪ, ಪರಶುರಾಮ್, ಚನ್ನಬಸಪ್ಪ, ಮೈಲಾರಪ್ಪ, ಶಾಂತಪ್ಪ, ಹೆಚ್. ಸುಜಾತ ಮತ್ತಿತರರು ಹಾಜರಿದ್ದರು.