ಬಾತಿ ಗ್ರಾಮದ ಚಮನ್ ಷಾ ಆಲಿ ದರ್ಗಾ ಉರುಸ್ ಸರಳ ಆಚರಣೆ – ಡಿಸಿ ಮಹಾಂತೇಶ್ ಬೀಳಗಿ
ದಾವಣಗೆರೆ: ದಾವಣಗೆರೆ ತಾಲ್ಲೂಕು ಬಾತಿ ಗ್ರಾಮದಲ್ಲಿ ಡಿ.22 ಮತ್ತು 23 ರಂದು ನಡೆಯುವ ಚಮನ್ ಷಾ ಆಲಿ ದರ್ಗಾ ಉರುಸ್ ಅನ್ನು ಕೋವಿಡ್-19 ರ ಮುಂಜಾಗ್ರತಾ ಕ್ರಮ ಕೈಗೊಂಡು ಅತಿ ಸರಳತೆಯಿಂದ ಯಾವುದೇ ಮೆರವಣಿಗೆ ಮತ್ತು ಸಭೆಗಳು ಇಲ್ಲದಂತೆ ಉರುಸ್ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಕಾರ್ಯಕ್ರಮವನ್ನು ಆಚರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡಿ.22 ಮತ್ತು 23 ರಂದು ದಾವಣಗೆರೆ ತಾಲ್ಲೂಕು ಬಾತಿ ಗ್ರಾಮದ ಚಮನ್ ಷಾ ಆಲಿ ದರ್ಗಾ ಇದರ ಉರುಸ್ ಆಚರಣೆ ಕಾರ್ಯಕ್ರಮದ ಕುರಿತು ಏರ್ಪಡಿಸಲಾದ ಪೂರ್ವಭಾವಿ ಶಾಂತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದರ್ಗಾದ ಆವರಣದಲ್ಲಿ ಈ ಉರುಸ್ ಆಚರಣೆ ದಿನಾಂಕಗಳಂದು ಅಂಗಡಿ ಮುಗ್ಗಟ್ಟುಗಳು, ಮಕ್ಕಳ ಮನೋರಂಜನೆಯ ಸಾಮಾಗ್ರಿಗಳು ಹಾಕುವಂತಿಲ್ಲ. ಮತ್ತು ಜಕಾತಿ ವಸೂಲಿ ಮಾಡುವಂತಿಲ್ಲ ಈ ಹಿಂದೆ ಹುಂಡಿ ಕಾಣಿಕೆಯನ್ನು ದರ್ಗಾದ ಮುಂಭಾಗದಲ್ಲಿ ಪೊಲೀಸ್ ಭದ್ರತೆಯೊಂದಿಗೆ ಅಳವಡಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ವಕ್ಪ್ ಅಧಿಕಾರಿಗಳಿಗೆ ತಿಳಿಸಿದರು.
ಈ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅಪರ ಜಿಲ್ಲಾಧಿಕಾರಿಗಳು, ಜಿಲ್ಲಾ ವಕ್ಪ್ ಅಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್, ಬಾತಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ರಾಜಸ್ವ ನಿರೀಕ್ಷಕರು, ಬಾತಿ ಗ್ರಾಮಲೆಕ್ಕಾಧಿಕಾರಿಗಳು ಮತ್ತು ದರ್ಗಾ ಸಮಿತಿಯ ಅಧ್ಯಕ್ಷರಾದ ಸೈಯದ್ ಜಬೀವುಲ್ಲಾ ಉಪಾಧ್ಯಕ್ಷರಾದ ಇಮ್ತಿಯಾಜ್ ಖಾನ್, ಮುಖಂಡರಾದ ಸಾಧಿಕ್ ಮತ್ತು ಟಿಪ್ಪುಸುಲ್ತಾನ್, ಇತರರು ಉಪಸ್ಥಿತರಿದ್ದರು.