ಕೋವಿಡ್ ನಂತರ ಹಲವು ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದು, ಭಿಕ್ಷಾಟನೆಗೆ, ಬಾಲ್ಯವಿವಾಹ, ಶಿಕ್ಷಣದಿಂದ ವಂಚಿತಗೊಂಡಿದ್ದಾರೆ :ಹಿರಿಯ ಸಿವಿಲ್ ನ್ಯಾಯಾಧೀಶ ಪ್ರವೀಣ್ ನಾಯ್ಕ್ ವಿಷಾದ

IMG-20211115-WA0167

ದಾವಣಗೆರೆ: ಕೋವಿಡ್ ನಂತರ ಹಲವು ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದು, ಭಿಕ್ಷಾಟನೆಗೆ, ಬಾಲ್ಯವಿವಾಹದ ಪದ್ಧತಿಗೆ ಒಳಗಾಗುತ್ತಿದ್ದಾರೆ, ಮತ್ತೆ ಕೆಲವು ಮಕ್ಕಳು ಶಿಕ್ಷಣದಿಂದ ವಂಚಿತಗೊಂಡಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಪ್ರವೀಣ್ ನಾಯ್ಕ್ ವಿಷಾದಿಸಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಯುನಿಸೆಫ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಮತ್ತು ರಾಜ್ಯ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮಕ್ಕಳ ಹಕ್ಕುಗಳ ಮಾಸಾಚರಣೆಯ ಅಂಗವಾಗಿ ಸೋಮವಾರ ನಗರದ ಡಯಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೋವಿಡ್-೧೯ ಅವಧಿಯು ಮಕ್ಕಳ ಮೇಲಾಗಿರುವ ದುಷ್ಪಾರಿಣಾಮಗಳ ಕುರಿತು ಸಾರ್ವಜನಿಕ ಅಹವಾಲು ವಿಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೋವಿಡ್ ನಂತರ ಹಲವಾರು ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಖಿನ್ನತೆಗೊಳಗಾಗಿದ್ದಾರೆ. ಕೆಲವು ಮಕ್ಕಳು ಶಿಕ್ಷಣದಿಂದ ವಂಚಿತಗೊಂಡಿವೆ. ಬಾಲ್ಯವಿವಾಹ ಮಾಡಲಾಗುತ್ತಿದೆ. ಭಿಕ್ಷಾಟನೆಗೆ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ. ಮಕ್ಕಳ ಕಳ್ಳಸಾಗಾಣೆ ಹೆಚ್ಚಾಗುತ್ತಿದೆ ಆದ್ದರಿಂದ ಮಕ್ಕಳನ್ನು ರಕ್ಷಿಸುವ ಹೊಣೆಯನ್ನು ಎಲ್ಲಾ ಇಲಾಖೆಯವರು ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದರು.

ಕರೋನಾ ಸೋಂಕಿನಿಂದ ಮೃತರಾದ ಕುಟುಂಬಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನೇಕ ಯೋಜನೆಗಳನ್ನು ರೂಪಿಸಿ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಅತ್ಯವಶ್ಯಕ ಸೌಕರ್ಯಗಳನ್ನು ಒದಗಿಸಬೇಕು. ಮಹಿಳೆಯರು ಮತ್ತು ಮಕ್ಕಳಿಗಾಗಿ ಕೇಂದ್ರ, ರಾಜ್ಯ ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಫಲಾನುಭವಿಗಳಿಗೆ ತಲುಪಿಸಬೇಕಾದ ಜವಾಬ್ದಾರಿ ಸಂಬಂಧಪಟ್ಟ ಇಲಾಖೆಗಳಿಗಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಿ.ಶಂಕರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋವಿಡ್ ಕಾರಣದಿಂದ ಪೋಷಕರನ್ನು ಅವಲಂಬಿತರನ್ನು ಕಳೆದುಕೊಂಡ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಕ್ಕಳ ಧ್ವನಿಯನ್ನು ಆಲಿಸಲು ಜಿಲ್ಲಾ ಮಟ್ಟ, ವಿಭಾಗೀಯ ಮಟ್ಟ ಮತ್ತು ರಾಜ್ಯ ಮಟ್ಟದಲ್ಲಿ ಸಭೆಯನ್ನು ಆಯೋಜಿಸಲು ಉದ್ದೇಶಿಸಲಾಗಿದ್ದು, ಪ್ರತಿ ಜಿಲ್ಲೆಗೂ ೩೦ ವಿದ್ಯಾರ್ಥಿಗಳನ್ನು ಕರೆಸಿ ಸಭೆ ನಡೆಸಿ ಸಮಸ್ಯೆ ಆಲಿಸಲಾಗುವುದು. ಈ ವಿದ್ಯಾರ್ಥಿಗಳ ಪೈಕಿ ೬ ವಿದ್ಯಾರ್ಥಿಗಳನ್ನು ನ.೨೨ ರಂದು ಚಿಕ್ಕಮಗಳೂರಿನಲ್ಲಿ ನಡೆಯುವ ಮಕ್ಕಳ ಸಾರ್ವಜನಿಕ ಅಹವಾಲು ಸಭೆಗೆ ಆಯ್ಕೆ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಹೆಚ್.ವಿಜಯಕುಮಾರ್, ರಾಜ್ಯ ಮಕ್ಕಳ ಹಕ್ಕಗಳ ರಕ್ಷಣಾ ಆಯೋಗದ ಸದಸ್ಯ ರಾಘವೇಂದ್ರ ಹೆಚ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರೇಷ್ಮಾ ಕೌಸರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ತಿಪ್ಪೇಸ್ವಾಮಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವೈ. ರಾಮಾನಾಯ್ಕ್, ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!