ಸಮಾಜವನ್ನು ನಿರ್ಲಕ್ಷಿಸಿದರೆ ಸಮಾಜಕ್ಕೆ ಸಿಗಬೇಕಾದ ಸವಲತ್ತುಗಳು ದೊರೆಯುವುದಿಲ್ಲ – ಚಿತ್ರದುರ್ಗದ ಮಡಿವಾಳ ಶ್ರೀ ಬಸವ ಮಾಚಿದೇವ

ದಾವಣಗೆರೆ: ಪ್ರತಿಯೊಂದು ಕೆಲಸಕ್ಕೂ ಏನಾದರೊಂದು ನಿರೀಕ್ಷೆ ಮಾಡುವ ನಾವುಗಳು ಸಮಾಜದ ಕೆಲಸಗಳನ್ನು ಗಾಳಿಗೆ ತೂರಿ ಬಿಡುತ್ತೇವೆ. ಸಮಾಜದಿಂದ ನಮಗೇನಾಗಬೇಕಿದೆ ಎನ್ನುವ ನಿರ್ಲಕ್ಷ್ಯ ತೋರುವ ಮೂಲಕ ಸಮಾಜವನ್ನು ಕಡೆಗಣಿಸುತ್ತಿದ್ದೇವೆ. ಇದೇ ರೀತಿ ಸಮಾಜವನ್ನು ನಿರ್ಲಕ್ಷಿಸಿದರೆ ಸಮಾಜಕ್ಕೆ ಸಿಗಬೇಕಾದ ಸವಲತ್ತುಗಳು ದೊರೆಯುವುದಿಲ್ಲ ಎಂದು ಚಿತ್ರದುರ್ಗದ ಮಡಿವಾಳ ಮಾಚೀದೇವ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಬಸವಮಾಚಿದೇವ ಶ್ರೀಗಳು ಹೇಳಿದರು.

ವಿನೋಬಾನಗರದ ಶ್ರೀಮಡಿವಾಳ ಮಾಚಿದೇವ ಸಮುದಾಯಭವನದಲ್ಲಿ ಮಂಗಳವಾರ ದಾವಣಗೆರೆ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆ ದಾವಣಗೆರೆ ಇವರ ಸಹಯೋಗದಲ್ಲಿ ಶ್ರೀಮಡಿವಾಳ ಮಾಚಿದೇವ ಸಂಘ, ಮಡಿಕಟ್ಟೆ ಸಮಿತಿಯಿಂದ ಆಯೋಜಿಸಲಾಗಿದ್ದ ಅಸಂಘಟಿತ ಕಾರ್ಮಿಕರ ವಲಯದಲ್ಲಿ ಬರುವ ಮಡಿವಾಳ ಸಮುದಾದ ವೃತ್ತಿನಿರತರಿಗೆ ಆಹಾರದ ಕಿಟ್ ವಿತರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಸಮಾಜದಿಂದ ನಮಗೇನು ಆಗುವುದಿಲ್ಲ ಎನ್ನುವ ಮನೋಭಾವ ನಮ್ಮಲ್ಲಿ ಬಂದಿದೆ. ಇದು ತಪ್ಪು ತಿಳುವಳಿಕೆ. ಸಮಾಜಕೋಸ್ಕರ ದುಡಿಯುತ್ತಿರುವಾಗ ನಮಗೇನೂ ಸಿಗುವುದಿಲ್ಲ. ನೀವು ಈ ರೀತಿ ಕೆಲಸ ಮಾಡುವುದರಿಂದ ಇಡೀ ಸಮುದಾಯಕ್ಕೆ ಸಹಾಯ ಆಗುತ್ತದೆ. ಆ ಕ್ಷಣಕ್ಕೆ ನಿಮಗೆ ಎನು ಸಿಗದೇ ಇರಬಹುದು. ಅಷ್ಟೇ ಅಲ್ಲ ಮುಂದೊಂದು ದಿನ ನಿಮ್ಮ ಕೆಲಸ ನಿಮಗೂ, ಸಮಾಜಕ್ಕೂ ಶೇ.೧೦೦ ಪ್ರತಿಫಲ ನೀಡಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಕೇವಲ ಸಮಾಜದಿಂದ ಸವಲತ್ತುಗಳನ್ನು ಪಡೆಯಲು ಒಂದೆಡೆ ಸೇರುವುದಲ್ಲ. ಸಮಾಜದ ಎಲ್ಲಾ ಕಾರ್ಯಕ್ರಮಗಳು, ಪ್ರತಿಭಟನೆಗಳು, ಹೋರಾಟಗಳಿಗೆ ಭಾಗವಹಿಸುತ್ತೇನೆ ಎನ್ನುವ ಮನಸ್ಸಿದ್ದರೆ ಮಾತ್ರ ಆಹಾರದ ಕಿಟ್ ಪಡೆಯಿರಿ ಇಲ್ಲವಾದಲ್ಲಿ ಪಡೆಯಬೇಡಿ ಎಂದು ಕಿಡಿಕಾರಿದ ಶ್ರೀಗಳು, ನಾವುಗಳ ಒಗ್ಗಟ್ಟಾಗಿ ಹೋರಾಟ ಮಾಡದಿದ್ದರೆ ಯಾವುದೇ ಸವಲತ್ತುಗಳು ನಮಗೆ ಸರ್ಕಾರದಿಂದ ದೊರೆಯುವುದಿಲ್ಲ. ಇದೇ ರೀತಿ ನಾವು ಸುಮ್ಮನಿದ್ದರೆ ಎಲ್ಲಾ ಸರ್ಕಾರಗಳು ನಮ್ಮನ್ನು ನಿರ್ಲಕ್ಷಿಸಲಿವೆ. ಅಷ್ಟೇ ಅಲ್ಲದ ನಮ್ಮತ್ತ ತಿರುಗಿಯೂ ನೋಡಲ್ಲ ಎಂದು ಹೇಳಿದರು.

ನಗರವಾಣಿ ಸಹ ಸಂಪಾದಕ ಬಿ.ಎನ್.ಮಲ್ಲೇಶ್ ಮಾತನಾಡಿ, ಇದೀಗ ತಂತ್ರಜ್ಞಾನದ ಕಾಲ, ಕಾಲಕ್ಕೆ ತಕ್ಕಂತೆ ನಮ್ಮಗಳ ವೃತ್ತಿ ಬದಲಾವಣೆ ಮಾಡಿಕೊಳ್ಳಬೇಕು. ಕೊರೋನಾದಂತಹ ಸಂದರ್ಭದಲ್ಲಿ ಎಲ್ಲಾ ವರ್ಗಗಳು ದುಡಿಮೆ ಇಲ್ಲದೇ ಬೀದಿಗೆ ಬಿದ್ದಿದ್ದಾರೆ. ಸರ್ಕಾರದಿಂದ ಇದೀಗ ಕೊಡುವ ಸೌಲಭ್ಯ ಸರ್ಕಾರ ತನ್ನ ಹಣದಿಂದ ನೀಡಲ್ಲ. ಬದಲಿಗೆ ನಮ್ಮಗಳ ತೆರಿಗೆ ಹಣದಿಂದಲೇ ನಮಗೆ ನೀಡುತ್ತಾರೆ. ಆದರೆ, ಅದರ ಗುಣಮಟ್ಟವನ್ನು ಇಲಾಖೆಗಳು ಕಾಯ್ದುಕೊಳ್ಳಬೇಕು. ಅಂತೆಯೇ ನಾವುಗಳು ಕಾಯಕ ಜೀವಿಗಳಾಗಬೇಕು. ಮಾತ್ರವಲ್ಲ ಶಿಕ್ಷಿತರಾಗಿ ಉನ್ನತ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಬೇಕೆಂದರು.

ಹಿರಿಯ ನ್ಯಾಯವಾದಿ ಎಲ್.ಹೆಚ್.ಅರುಣ್‌ಕುಮಾರ್ ಮಾತನಾಡಿ, ಸರ್ಕಾರ ನೀಡಿದಂತಹ ಯಾವುದೇ ಸೌಲಭ್ಯಗಳಾಗಲೀ ಅದರಲ್ಲಿ ರಾಜಕಾರಣಿಗಳು, ಅವರ ಹಿಂಬಾಲಕರ ಹಸ್ತಕ್ಷೇಪ ಇದ್ದೇಇರುತ್ತದೆ. ಈ ರೀತಿ ಎಲ್ಲಾ ಹಂತಗಳನ್ನು ದಾಟಿ ಅಧಿಕಾರಿಗಳು ಸಾರ್ವಜನಿಕರಿಗೆ ಸವಲತ್ತುಗಳನ್ನು ನೀಡಬೇಕು. ಕರೋನಾದಂತಹ ಸಂದರ್ಭದಲ್ಲಿ ಸಂಘಟಿತ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಸೇರಿದಂತೆ ಎಲ್ಲಾ ವಲಯದ ಕಾರ್ಮಿಕರಿಗೂ ಹಸಿವಿನಿಂದ ತೊಂದರೆಗೆ ಒಳಗಾಗದರು. ಇಂತಹ ಹಸಿದವರ ನೆರವಿಗೆ ಬರಬೇಕಾದದು ನಮ್ಮೆಲ್ಲರ ಆದ್ಯ ಕರ್ತವ್ಯ ಆಗಬೇಕಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾವಣಗೆರೆ ಜಿಲ್ಲಾ ಮಡಿವಾಳ ಮಾಚಿದೇವ ಸಂಘದ ಜಿಲ್ಲಾಧ್ಯಕ್ಷ ಎಂ.ನಾಗೇಂದ್ರಪ್ಪ ವಹಿಸಿದ್ದರು.

ಕಾರ್ಮಿಕ ಇಲಾಖೆಯ ಜಿಲ್ಲಾ ಅಧಿಕಾರಿ ಇಬ್ರಾಹಿಂ ಸಾಬ್, ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜಾಧ್ಯಕ್ಷ ಅವರಗೆರೆ ಹೆಚ್.ಜಿ.ಉಮೇಶ್, ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಅಧ್ಯಕ್ಷ ಬಿ.ಆರ್.ಪ್ರಕಾಶ್ ಮಾತನಾಡಿದರು.

ವೇದಿಕೆಯಲ್ಲಿ ದೀಪಕ್, ಪತ್ರಕರ್ತ ಎಂ.ವೈ.ಸತೀಶ್, ಕೋಗುಂಡೆ ಸುರೇಶ್, ಎಂ.ಮಂಜುನಾಥ್, ವಿಜಯ್‌ಕುಮಾರ್, ಮಡಿಕಟ್ಟೆ ಸಂಘದ ಅಧ್ಯಕ್ಷ ಫಕ್ಕೀರಸ್ವಾಮಿ, ಕಿಶೋರ್‌ಕುಮಾರ್, ಮಂಜುನಾಥ್ ಕಕ್ಕರಗೊಳ್ಳ, ಬಸವರಾಜ್, ರುದ್ರೇಶ್, ನಾಗಮ್ಮ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!